ರಾಜ್ಯ

ಅಕ್ಟೋಬರ್ 20ರಿಂದ ಸುಳ್ವಾಡಿ ಮಾರಮ್ಮ ದೇಗುಲದಲ್ಲಿ ಪೂಜೆ-ಪುನಸ್ಕಾರ ಆರಂಭ

Manjula VN

ಮೈಸೂರು: 2018ರ ಡಿ.14ರಂದು ಸಂಭವಿಸಿದ್ದ ವಿಷ ಪ್ರಸಾದ ದುರಂತದ ಬಳಿಕ ಬಾಗಿಲು ಮುಚ್ಚಿದ್ದ ಹನೂರು ತಾಲೂಕಿನ ಕಿಚ್ಚುಗುತ್ತಿ ಮಾರಮ್ಮನ ದೇವಾಲಯದಲ್ಲಿ ಅ.20ರಿಂದ ಪೂಜೆ-ಪುನಸ್ಕಾರಗಳು ಪುನರಾರಂಭಗೊಳ್ಳಲಿದೆ. 

2018ರ ಡಿಸೆಂಬರ್ ತಿಂಗಳಿನಲ್ಲಿ ದೇವಾಲಯದಲ್ಲಿ ದುರಂತವೊಂದು ಸಂಭವಿಸಿತ್ತು. ವಿಷ ಪ್ರಸಾದ ಸೇವನೆ ಮಾಡಿದ ಪರಿಣಾಮ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ 17 ಮಂದಿ ಸಾವನ್ನಪ್ಪಿದ್ದರು. ಅಲ್ಲದೆ, 100ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. 

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದರು. ವಿಚಾರಣೆ ವೇಳೆ ಆರೋಪಿಗಳು ಮಹದೇಶ್ವರ ಬೆಟ್ಟದ ಸಾಲೂರು ಮಠದ ಕಿರಿಯ ಸ್ವಾಮೀಜಿ ಇಮ್ಮಡಿ ಮಹದೇವಸ್ವಾಮಿ ಹಾಗೂ ಇತರ ಮೂವರು ದೇವಾಲಯದ ಆದಾಯದ ಮೇಲಿನ ನಿಯಂತ್ರಣಕ್ಕಾಗಿ ಈ ಕೃತ್ಯ ಎಸಗಿದ್ದರು ಎಂಬುದು ತಿಳಿದುಬಂದಿತ್ತು. ಪ್ರಸ್ತುತ ನಾಲ್ವರು ಆರೋಪಿಗಳೂ ನ್ಯಾಯಾಂಗ ಬಂಧನದಲ್ಲಿದ್ದಾರೆ.

ದುರಂತ ಸಂಭವಿಸಿದ ಸಮಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಾಜ್ಯದಲ್ಲಿ ಸರ್ಕಾರ ನಡೆಸುತ್ತಿತ್ತು. ಅಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಮೃತ ಕುಟುಂಬಕ್ಕೆ ರೂ.12.5 ಲಕ್ಷ ಪರಿಹಾರ ಘೋಷಣೆ ಮಾಡಿದ್ದರು. ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದವರಿಗೆ ರೂ.1.5 ಲಕ್ಷ ಪರಿಹಾರ ನೀಡಿದ್ದರು. 

ಆದರೆ, ಈ ಪರಿಹಾರ ಪಡೆದಿದ್ದ ಬಹುತೇಕ ಜನರು ಪರಿಹಾರದ ಹಣವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಖರ್ಚು ಮಾಡಿದ್ದಾರೆ. ಸಾಕಷ್ಟು ಆಸ್ಪತ್ರೆಗಳು ಉಚಿತವಾಗಿ ಚಿಕಿತ್ಸೆ ನೀಡಲು ನಿರಾಕರಿಸಿವೆ ಎಂಬ ಮಾತುಘಲು ಕೇಳಿಬಂದಿದ್ದವು. 

ಈ ಬೆಳವಣಿಗೆ ಬಳಿಕ ಸರ್ಕಾರ ಸಂತ್ರಸ್ತರಿಗೆ 2 ಎಕರೆ ಭೂಮಿ ನೀಡುವುದಾಗಿ ಘೋಷಿಸಿತ್ತು. ಆದರೆ, ಭೂಮಿ ಪಡೆದ ಜನರು ಸರ್ಕಾರ ನಮಗೆ ವಿವಾದಿತ ಭೂಮಿಯನ್ನು ನೀಡಿದ್ದು, ಆ ಭೂಮಿಯಲ್ಲಿ ಯಾವುದೇ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. 

SCROLL FOR NEXT