ರಾಜ್ಯ

ಬೆಂಗಳೂರು: ನಕಲಿ ಮಿಲಿಟರಿ ವಾರಂಟ್ ನಲ್ಲಿ ಪ್ರಯಾಣಿಸುತ್ತಿದ್ದ 10 ವಲಸೆ ಕಾರ್ಮಿಕರ ಬಂಧನ

Sumana Upadhyaya

ಬೆಂಗಳೂರು: ಕಳೆದ ಅಕ್ಟೋಬರ್ 8ರಂದು ಅಸ್ಸಾಂನಿಂದ ಗುವಾಹಟಿ ಎಕ್ಸ್ ಪ್ರೆಸ್ ನಲ್ಲಿ ಬೆಂಗಳೂರಿಗೆ ಬಂದಿಳಿದ 10 ಮಂದಿ ವಲಸೆ ಕಾರ್ಮಿಕರು ನಕಲಿ ಮಿಲಿಟರಿ ವಾರಂಟ್ ನಲ್ಲಿ ಪ್ರಯಾಣಿಸಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.

ಈ ವಲಸೆ ಕಾರ್ಮಿಕರು ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿಯಿಂದ ರೈಲು ಹತ್ತಿದ್ದರು. ರಕ್ಷಣಾ ಸಚಿವಾಲಯ ತನ್ನ ಸಿಬ್ಬಂದಿಗಳಿಂದ ನೀಡುವ ಪಾಸ್ ಮಿಲಿಟರಿ ವಾರಂಟ್ ಆಗಿದ್ದು, ಭಾರತೀಯ ರೈಲ್ವೆಯಲ್ಲಿ ಟಿಕೆಟ್ ದರವಿಲ್ಲದೆ ಎಲ್ಲಿಗೆ ಬೇಕಾದರೂ ಪ್ರಯಾಣಿಸಬಹುದು. ಇದರ ನಕಲಿ ಮಾಡುವುದು ಗಂಭೀರ ಅಪರಾಧವಾಗಿದ್ದು ಇದು ಅಧಿಕಾರಿಗಳ ಗಮನಕ್ಕೆ ಬಂದಿದ್ದು ನಿನ್ನೆ.

ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿ, ನಕಲಿ ದಾಖಲೆಗಳೊಂದಿಗೆ ವಲಸೆ ಕಾರ್ಮಿಕರು ರೈಲಿನ ಎಸ್ 5 ಬೋಗಿಯಲ್ಲಿ ಪ್ರಯಾಣಿಸುತ್ತಿದ್ದಾರೆ ಎಂಬ ನಿಖರ ಮಾಹಿತಿ ಪಡೆದು ಟ್ರಾಫಿಕ್ ಅಕೌಂಟ್ಸ್ ಮತ್ತು ರೈಲ್ವೆ ರಕ್ಷಣಾ ಪಡೆಯ ಅಧಿಕಾರಿಗಳು ರಾತ್ರಿ 9.30ರ ಹೊತ್ತಿಗೆ ದಾಳಿ ನಡೆಸಿದರು. 35ರಿಂದ 50 ವರ್ಷದೊಳಗಿನವರು ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಅವರ ಬಳಿಯಿಂದ ಆಧಾರ್ ಕಾರ್ಡುಗಳನ್ನು ವಶಪಡಿಸಿಕೊಳ್ಳಲಾಗಿದ್ದು ಅದು ಅವರದ್ದಾಗಿರಲಿಲ್ಲ ಎಂದರು.

ಆರಂಭದಲ್ಲಿ ಅವರ ವಿರುದ್ಧ ರೈಲ್ವೆ ಕಾಯ್ದೆ ಸೆಕ್ಷನ್ 137 ಮತ್ತು 138ರಡಿ ಕೇಸು ದಾಖಲಿಸಲಾಯಿತು. ಪ್ರತಿಯೊಬ್ಬರಿಗೆ 1750 ರೂಪಾಯಿ ದಂಡ ಹಾಕಲಾಯಿತು. ಅವರ ವಿವರಗಳನ್ನು ಪಡೆದು ಬಿಟ್ಟುಬಿಟ್ಟೆವು ಎಂದು ಅಧಿಕಾರಿಗಳು ಹೇಳುತ್ತಾರೆ. ಆರ್ ಪಿಎಫ್ ಅವರಿಗೆ ಸಮ್ಮನ್ಸ್ ಜಾರಿ ಮಾಡಿ ಸೋಮವಾರ ಹಾಜರಾಗುವಂತೆ ತಿಳಿಸಲಾಯಿತು,ಆಗ ವಿಚಾರಣೆ ಮಾಡಿ ನೋಡುವಾಗ ಮಿಲಿಟರಿ ವಾರಂಟ್ ನಕಲಿ ಮಾಡಿ ಪ್ರಯಾಣಿಸಿದ್ದು ಬಹಿರಂಗವಾಯಿತು. ಅವರ ಗ್ರಾಮ ನ್ಯೂ ಜಲ್ಪೈಗುರಿಯಲ್ಲಿ ನಕಲಿ ಮಾಡಿಕೊಟ್ಟ ವ್ಯಕ್ತಿಗೆ 10 ಸಾವಿರ ಲಂಚ ಕೊಟ್ಟಿದ್ದರು.

ಬೆಂಗಳೂರಿಗೆ ಉದ್ಯೋಗ ಅರಸಿಕೊಂಡು ಬಂದಿದ್ದರು. ಅಲಿಪುರ್ದೌರ್ ರೈಲ್ವೆ ವಿಭಾಗಕ್ಕೆ ವಂಚನೆ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ನಕಲಿ ದಾಖಲೆ ನೀಡಿದ ವ್ಯಕ್ತಿಯನ್ನು ಪತ್ತೆಹಚ್ಚಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT