ರಾಜ್ಯ

ನವರಾತ್ರಿ ಇಂದು ಆರಂಭ: ತಲಕಾವೇರಿಯಲ್ಲಿ ತೀರ್ಥೋದ್ಭವ

Sumana Upadhyaya

ಕೊಡಗು: ಇಂದು ಶನಿವಾರ ನವರಾತ್ರಿಯ ಮೊದಲ ದಿನ. ನಾಡಿನ ಜನತೆ ಲಗುಬಗೆಯಿಂದ ಶರನ್ನವರಾತ್ರಿ ಆಚರಣೆಗೆ ಸಿದ್ಧರಾಗಿದ್ದಾರೆ.

ಕೊಡಗು ಜಿಲ್ಲೆಯ ಭಾಗಮಂಡಲದ ತಲಕಾವೇರಿಯಲ್ಲಿ ಇಂದು ಬೆಳಗ್ಗೆ 7 ಗಂಟೆ 3 ನಿಮಿಷಕ್ಕೆ ಕನ್ಯಾಲಗ್ನದಲ್ಲಿ ತೀರ್ಥೋದ್ಭವವಾಗಿದೆ. ಬ್ರಹ್ಮಕುಂಡಿಕೆಯ ಬಳಿ ಗೋಪಾಲ್ ಕೃಷ್ಣ ಆಚಾರ್ ಪುರೋಹಿತರ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯ ಸಾಗಿದೆ.

ಕೋವಿಡ್-19 ನಿಯಮ ಜಾರಿಯಲ್ಲಿರುವುದರಿಂದ ತೀರ್ಥೋದ್ಭವ ಸಂದರ್ಭದಲ್ಲಿ ದೇವಾಲಯ ಅರ್ಚಕರು, ಸಿಬ್ಬಂದಿ ಮತ್ತು ಉಸ್ತುವಾರಿ ಸಚಿವರು ಹಾಗೂ ಕೆಲವೇ ಅಧಿಕಾರಿಗಳಿಗೆ ಮಾತ್ರವೇ ಈ ಬಾರಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದ್ದು, ತೀರ್ಥೋಧ್ಭವದ ಬಳಿಕ ಭಕ್ತರು ತಲಕಾವೇರಿಗೆ ಬಂದು ತೀರ್ಥ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ತೀರ್ಥ ಪಡೆದುಕೊಳ್ಳಲು ನೂಕುನುಗ್ಗಲು ಆಗದಂತೆ ಕೊಳದ ಸುತ್ತಮುತ್ತ ಬ್ಯಾರಿಕೇಡ್ ಅಳವಡಿಸಲಾಗಿದೆ. ತೀರ್ಥ ವಿತರಣೆಗೆ ಐದು ಕೌಂಟರ್ ತೆರೆಯಾಗಿದ್ದು, ಪ್ರತಿ ಕೌಂಟರ್ ಬಳಿ ತಲಾ ಎರಡು ಮೂರು ಕೊಳಾಯಿಗಳನ್ನು ಇಟ್ಟು ವ್ಯವಸ್ಥೆ ಮಾಡಲಾಗಿದೆ. ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬರುವ ಭಕ್ತರಿಗೆ ಕೋವಿಡ್ ಟೆಸ್ಟ್ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ.

ಇನ್ನು ತೀರ್ಥೋದ್ಭವ ಸಂದರ್ಭದಲ್ಲಿ ತಮ್ಮನ್ನು ಭಾಗವಹಿಸಲು ಅವಕಾಶ ನಿರಾಕರಿಸಿದ್ದಕ್ಕೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತೀರ್ಥೋಧ್ಭವ ವರ್ಷಕ್ಕೆ ಒಮ್ಮೆ ಆಗುವುದು, ಅದಕ್ಕೆ ಬಿಡೋದಿಲ್ಲ ಅಂದರೆ ಹೇಗೆ? ಇದು ಭಾರತವೇ ಇಲ್ಲ ಪಾಕಿಸ್ತಾನವೇ. ಎಲ್ಲದಕ್ಕೂ ಕೊರೊನಾ ಕೊರೊನಾ ಎಂದರೆ ಹೇಗೆ ಎಂದು ಬೇಸರ ವ್ಯಕ್ತಪಡಿಸಿದರು.

SCROLL FOR NEXT