ರಾಜ್ಯ

ಪ್ರವಾಹ ಪರಿಹಾರಕ್ಕೆ 85 ಕೋಟಿ ರು. ತುರ್ತು ಪರಿಹಾರ ಬಿಡುಗಡೆ ಮಾಡಿದ ಸಿಎಂ ಯಡಿಯೂರಪ್ಪ

Shilpa D

ಬೆಂಗಳೂರು: ಬೆಳೆ ಹಾನಿಯಾಗಿ ಸಂಕಷ್ಟಕ್ಕೆ ಸಿಲುಕಿರುವ 51,810 ಸಂತ್ರಸ್ತ ರೈತರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ 36.57 ಕೋಟಿ ರು. ಇನ್‌ಪುಟ್‌ ಸಬ್ಸಿಡಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಆನ್‌ಲೈನ್‌ ಮೂಲಕ ಜಮೆ ಮಾಡಿದರು.

ಪ್ರವಾಹ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆಗೆ ಶುಕ್ರವಾರ ನಡೆದ ವಿಡಿಯೊ ಸಂವಾದದ ಬಳಿಕ ಹಣ ಬಿಡುಗಡೆ ಮಾಡಿ ಮಾತನಾಡಿದ ಅವರು, ಕಳೆದ 15 ದಿನಗಳ ಮಳೆ ಮತ್ತು ಪ್ರವಾಹದಿಂದ ಆಗಿರುವ ಎಲ್ಲ ಬಗೆಯ ನಷ್ಟಗಳ ಸಮೀಕ್ಷೆ ನಡೆಸಬೇಕು. ಜನ, ಜಾನುವಾರುಗಳ ಪ್ರಾಣ ಹಾನಿ, ಮೂಲಸೌಕರ್ಯಗಳು, ಕಟ್ಟಡಗಳು, ರಸ್ತೆಗಳು ಮತ್ತು ವಿವಿಧ ರೀತಿಯ
ಬೆಳೆಗಳ ನಷ್ಟ ಪರಿಶೀಲಿಸಬೇಕು. ಒಟ್ಟಾರೆ ಸಮೀಕ್ಷೆ ಮಾಡಿ ನಷ್ಟದ ಅಂದಾಜು ನೀಡುವ ಬದಲು, ಪ್ರತ್ಯೇಕವಾಗಿ ನಷ್ಟವನ್ನು ಅಂದಾಜು ಮಾಡಿ. ಇದರಿಂದ ನಿಖರವಾಗಿ ಪರಿಹಾರ ನೀಡಲು ಅನುಕೂಲವಾಗುತ್ತದೆ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಪೂರ್ಣ ಮತ್ತು ಭಾಗಶಃ ಕುಸಿದಿರುವ ಮಣ್ಣಿನ ಮನೆಗಳನ್ನು ನೆಲಸಮಗೊಳಿಸಿ, ಸಿಮೆಂಟ್‌ ಬಳಸಿ ಹೊಸ ಮನೆಗಳ ನಿರ್ಮಾಣಕ್ಕೆ ತಲಾ ರು. 5ಲಕ್ಷ ವಿತರಿಸಲು ಯೋಜನೆಯನ್ನು ರೂಪಿಸಬೇಕು ಎಂದು ಹೇಳಿದರು. 

ಅಗತ್ಯ ಸಂಪನ್ಮೂಲ ಒದಗಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಜಿಲ್ಲಾಧಿಕಾರಿಗಳಿಗೆ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗುವಂತೆ ಸಿಎಂ ಬಿಎಸ್​ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳ ಜಿಲ್ಲಾಧಿಕಾರಿಗಳು, ಪೊಲೀಸ್​ ವರಿಷ್ಠಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್​ ಮುಖ್ಯ ಕಾರ್ಯನಿರ್ವಹಕಾಧಿಕಾರಿಗಳೊಂದಿಗೆ ಮುಖ್ಯಮಂತ್ರಿಗಳು ಇಂದು ವಿಡಿಯೋ ಕಾನ್ಫರೆನ್ಸ್​ ಮೂಲಕ ಸಭೆ ನಡೆಸಿ ನಡೆಸಿ ಪರಿಸ್ಥಿತಿ ಅವಲೋಕಿಸಿದರು. 

ಸಾಂತ್ವನ ಕೇಂದ್ರಗಳಲ್ಲಿ ಕೋವಿಡ್‌ ಹರಡದಂತೆ ಎಚ್ಚರಿಕೆ ವಹಿಸಬೇಕು. ಪ್ರತಿ ಕೇಂದ್ರದಲ್ಲೂ ಇಬ್ಬರು ವೈದ್ಯರು ಇದ್ದು ಕೋವಿಡ್‌ ಪರೀಕ್ಷೆ ನಡೆಸಬೇಕು. ಇಲ್ಲಿ ಆಶ್ರಯ ಪಡೆದವರಿಗೆ ಉತ್ತಮ ಗುಣಮಟ್ಟದ ಆಹಾರವನ್ನು ಬಿಸಿ ಬಿಸಿಯಾಗಿಯೇ ನೀಡಬೇಕು ಎಂದರು. ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ತುರ್ತು ಪರಿಹಾರಕ್ಕೆ 85.49  ಕೋಟಿ ರು. ಬಿಡುಗಡೆ ಮಾಡಲಾಗಿದೆ. ಪರಿಹಾರ ಕಾರ್ಯಕ್ಕೆ ಹಣದ ಕೊರತೆ ಇಲ್ಲ ಎಂದು ತಿಳಿಸಿದರು.

ಮಳೆಯಿಂದ ಉಪನದಿಗಳ ಒಳಹರಿವು ಹೆಚ್ಚಳವಾಗಿದ್ದು, ಭೀಮಾ ಮತ್ತು ಇತರೆ ಉಪನದಿಗಳು ಉಕ್ಕಿ ಹರಿಯುತ್ತಿದ್ದು, ಪ್ರವಾಹ ಹೆಚ್ಚಾಗಿದೆ. ಈಗಾಗಲೇ ಹಲವು ಗ್ರಾಮಗಳು ಪ್ರವಾಹದಲ್ಲಿ ಮುಳುಗಿದೆ. ನದಿ ಪಾತ್ರದ  ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ ಅವರಿಗೆ, ಅಗತ್ಯ ಸೌಕರ್ಯ, ಉತ್ತಮ ಆಹಾರ ಪೂರೈಕೆ ಮಾಡಬೇಕು ಎಂದು ಆದೇಶಿಸಿದ್ದಾರೆ.

SCROLL FOR NEXT