ರಾಜ್ಯ

ಪ್ರವಾಹದಿಂದಾಗಿ ರಾಜ್ಯಕ್ಕೆ ರೂ.9952 ಕೋಟಿ ನಷ್ಟ: ಸಿಎಂ ಯಡಿಯೂರಪ್ಪ

Manjula VN

ಮೈಸೂರು: ಪ್ರಾಕೃತಿಕ ವಿಕೋಪದಿಂದಾಗಿ ರಾಜ್ಯದಲ್ಲಿ ಆಗಸ್ಟ್, ಸೆಪ್ಟೆಂಬರ್ ತಿಂಗಳಿನಲ್ಲಿ ಒಟ್ಟು ರೂ.9,952 ಕೋಟಿ ನಷ್ಟ ಉಂಟಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದ್ದಾರೆ. 

ಚಾಮುಂಡಿ ಬೆಟ್ಟದಲ್ಲಿ ಶನಿವಾರ ನಾಡಹಬ್ಬ ದಸರಾ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರೀ ಮಳೆ, ಪ್ರವಾಹದಿಂದಾಗಿ 10.07 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಪಾರ ಬೆಳೆಗಳಿಗೆ ಹಾನಿಯುಂಟಾಗಿದ್ದು, ರೂ.9,952 ಕೋಟಿ ನಷ್ಟ ಎದುರಾಗಿದೆ. ಇಷ್ಟಾದರೂ ಪ್ರಾಕೃತಿಕ ವಿಕೋಪ ಪರಿಹಾರಕ್ಕೆ ಸ್ಪಂದಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ತ್ವರಿತ ಪರಿಹಾರಕ್ಕೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ. 

ಅತಿವೃಷ್ಟಿಯಿಂದಾಗಿ ರಾಜ್ಯದಲ್ಲಿ ಮೂಲಸೌಲಭ್ಯಕ್ಕೆ ಭಾರೀ ಹಾನಿಯಾಗಿದೆ. ರೂ.4,851 ಕೋಟಿ ಮೌಲ್ಯದಷ್ಟು ಮೂಲಸೌಲಭ್ಯ ನಷ್ಟವಾಗಿದೆ. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಸಾಕಷ್ಟು ಅನುದಾನ ಲಭ್ಯವಿದ್ದು, ಜನರಿಂದ ದೂರು ಬಾರದಂತೆ ಪರಿಹಾರ ಕಲ್ಪಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. 

ಉತ್ತರ ಕರ್ನಾಟಕದ ಜನರ ಜೊತೆ ಸರ್ಕಾರ ಸದಾ ಇರಲಿದೆ. ಕಲಬುರಗಿಯಲ್ಲಿ ಪ್ರವಾಹ ಪೀಡಿತ ಗ್ರಾಮಗಳನ್ನೇ ಸ್ಥಳಾಂತರಿಸಿ ಉತ್ತಮ ಪರ್ಯಾಯ ವ್ಯವಸ್ಥೆ ಒದಗಿಸಲಾಗಿದೆ. ರಾಜ್ಯದ 51,810 ರೈತರಿಗೆ ಬೆಳೆ ಪರಿಹಾರವಾಗಿ ಒಟ್ಟು ರೂ.36.57 ಕೋಟಿಯನ್ನು ಅವರ ಖಾತೆಗೆ ಜಮೆ ಮಾಡಲಾಗಿದೆ. ಎಲ್ಲೆಡೆ ಪ್ರಾಕೃತಿಕ ವಿಕೋಪ ತಡೆ ಯೋಜನೆ ಜಾರಿಯಲ್ಲಿದ್ದು ಪರಿಹಾರ ವಿತರಣೆ ಸುಲಭವಾಗಿದೆ ಎಂದಿದ್ದಾರೆ. 

SCROLL FOR NEXT