ರಾಜ್ಯ

ಶಿಕ್ಷಕರಿಗೆ ಮತ್ತೊಂದು ಸಂಕಷ್ಟ: ಕೊರೋನಾ ಆಯ್ತು, ಈಗ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲು ಸರ್ಕಾರ ಚಿಂತನೆ!

Srinivasamurthy VN

ಬೆಂಗಳೂರು: ಆತಂಕದ ನಡುವಲ್ಲೇ ಕೊರೋನಾ ಕರ್ತವ್ಯ ನಿಭಾಯಿಸುತ್ತಿರುವ ಶಿಕ್ಷಕರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಕೊರೋನಾ ಕರ್ತವ್ಯ ಬಳಿಕ ಉಪಚುನಾವಣಾ ಕರ್ತವ್ಯಕ್ಕೆ ಶಿಕ್ಷಕರನ್ನು ನಿಯೋಜಿಸಲು ಸರ್ಕಾರ ಮುಂದಾಗಿದೆ. 

ಮತ್ತೆ ಶಾಲೆಗಳಲ್ಲಿ ಬೋಧನೆಗಳನ್ನು ಯಾವಾಗ ಆರಂಭಿಸುತ್ತೀವೋ ತಿಳಿಯುತ್ತಿಲ್ಲ. ಈ ಬಗ್ಗೆ ಅಧಿಕೃತವಾಗಿ ಯಾವುದೇ ಆದೇಶಗಳೂ ಬರುತ್ತಿಲ್ಲ. ಮೇ ತಿಂಗಳಿನಿಂದ ನಾನು ಕೊರೋನಾ ಕರ್ತವ್ಯವನ್ನು ನಿಭಾಯಿಸುತ್ತಿದ್ದೇನೆ. ಆಗಸ್ಟ್ ತಿಂಗಳಿನಲ್ಲಿಯೂ ಮತ್ತೆ ನಿಯೋಜಿಸಲಾಗಿದೆ ಎಂದು ಸರ್ಕಾರಿ ಶಾಲೆಯ ಶಿಕ್ಷಕಿ ಸವಿತಾ ಎಂಬುವವರು ಹೇಳಿದ್ದಾರೆ. 

ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿರುವ ಶಿಕ್ಷಕರಲ್ಲಿ ವಿದ್ಯಾಗಮ ಯೋಜನೆಯ ಕರ್ತವ್ಯವನ್ನೂ ನಿಭಾಯಿಸುತ್ತಿದ್ದಾರೆಂದು ಕರ್ನಾಟಕ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಕೆ.ಮಂಜುನಾಥ್ ಅವರು ಹೇಳಿದ್ದಾರೆ. 

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಶಿಕ್ಷಕಿ ಸುಮಾ (ಹೆಸರು ಬದಲಿಸಲಾಗಿದೆ) ಮಾತನಾಡಿ, ಬೆಳಿಗಿನ ಸಮಯದಲ್ಲಿ ಆನ್'ಲೈನ್ ಮೂಲಕ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತದೆ. ನಂತರ ಮತ್ತೆ ಕೊರೋನಾ ಕರ್ತವ್ಯಕ್ಕೆ ಹಾಜರಾಗುತ್ತೇನೆ. 50 ವರ್ಷಕ್ಕಿಂತ ಮೇಲ್ಪಟ್ಟ ಸಾಕಷ್ಟು ಮಹಿಳಾ ಶಿಕ್ಷಕರನ್ನು ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ. ಇದು ಸಾಕಷ್ಟು ಆತಂಕವನ್ನುಂಟು ಮಾಡಿದೆ. ವಿದ್ಯಾಗಮ ಯೋಜನೆಯಡಿ ಬೋಧನೆ ಮಾಡುತ್ತಿದ್ದ ಯುವ ಶಿಕ್ಷಕರು ದಸರಾ ರಜೆಯನ್ನು ಪಡೆದುಕೊಂಡಿದ್ದಾರೆಂದು ಬೇಸರ ವ್ಯಕ್ತಪಡಿಸಿದ್ದಾರೆ. 

ಕೊರೋನಾ ಕರ್ತವ್ಯ ಎಲ್ಲಾ ಶಿಕ್ಷಕರಿಗೂ ಹಂಚಿಕೆಯಾಗಬೇಕು. ರಜೆಯಿಲ್ಲದೆ ಸಾಕಷ್ಟು ಶಿಕ್ಷಕರು ಕೊರೋನಾ ಕರ್ತವ್ಯ ನಿಭಾಯಿಸುತ್ತಿದ್ದಾರೆಂದು ತಿಳಿಸಿದ್ದಾರೆ. 

ಈ ನಡುವೆ ಸಾಕಷ್ಟು ಶಿಕ್ಷಕರ ಸಂಘಟನೆಗಳು ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಕೊರೋನಾ ಕರ್ತವ್ಯ ನಿಭಾಯಿಸುತ್ತಿರುವ ಶಿಕ್ಷಕರಿಗೆ ವಾರದಲ್ಲಿ ಎರಡು ದಿನವಾದರೂ ರಜೆ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ. 

SCROLL FOR NEXT