ರಾಜ್ಯ

ಹಬ್ಬ ಮತ್ತು ಚಳಿಗಾಲದ ಸಂದರ್ಭದಲ್ಲಿ ಕೊರೋನಾ ಸೋಂಕು ಹರಡುವ ಸಾಧ್ಯತೆ ಹೆಚ್ಚು: ತಜ್ಞರ ಎಚ್ಚರಿಕೆ

Srinivasamurthy VN

ಬೆಂಗಳೂರು: ಕಳೆದೆರಡು ವಾರಗಳಿಂದ ರಾಜ್ಯದಲ್ಲಿ ಮತ್ತು ದೇಶದ ಇತರೆ ಭಾಗಗಳಲ್ಲಿ ಮಾರಕ ಕೊರೋನಾ ವೈರಸ್ ನ ಆರ್ಭಟ ತಗ್ಗಿದೆಯಾದರೂ ಹಬ್ಬ ಮತ್ತು ಚಳಿಗಾಲದ ಸಂದರ್ಭದಲ್ಲಿ ಮತ್ತೆ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ರಾಜೀವ್ ಗಾಂಧಿ ಎದೆರೋಗ ಆಸ್ಪತ್ರೆಯ ಮುಖ್ಯಸ್ಥ ಡಾ. ಸಿ ನಾಗರಾಜು ಅವರು ಮಾತನಾಡಿದ್ದು, ಕಳೆದೆ ಕೆಲ ದಿನಗಳಿಂದ ಹೊಸ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಕುಸಿತವಾಗಿದೆ. ಇದು ಆಶಾದಾಯಕವೇ ಆದರೂ ಚಳಿಗಾಲ ಮತ್ತು ಹಬ್ಬದ ದಿನಗಳಲ್ಲಿ ಜನರು ಮೈ ಮರೆತರೆ ಈ ಅಪಾಯ ಕಟ್ಟಿಟ್ಟ  ಬುತ್ತಿ. ರಾಜ್ಯದಲ್ಲಿ ಹೊಸ ಸೋಂಕಿತರ ಸಂಖ್ಯೆ ಕಡಿಮೆಯಾಗಿರಬಹುದು. ನಗರದಲ್ಲಿ ದಾಖಲಾಗುತ್ತಿದ್ದ ಒಟ್ಟಾರೆ ಸೋಂಕಿತರ ಸಂಖ್ಯೆಯಲ್ಲಿ 500ರಷ್ಟು ಕಡಿಮೆಯಾಗಿದ್ದು, ರಾಜ್ಯದಲ್ಲಿ ಸರಾಸರಿ 3800 ಹೊಸ ಸೋಂಕು ಪ್ರಕರಣಗಳು ದಾಖಲಾಗುತ್ತಿವೆ. ಆದರೆ ಆಘಾತಕಾರಿ ವಿಚಾರವೆಂದರೆ ಈಗಲೂ ಎಲ್ಲ ಕೋವಿಡ್  ಆಸ್ಪತ್ರೆಗಳಲ್ಲಿ ಐಸಿಯುಗಳು ಭರ್ತಿಯಾಗಿಯೇ ಇದೆ. ಈಗಲೂ ಸಾಕಷ್ಟು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಇದೆ. ಸಾಕಷ್ಟು ಸೋಂಕಿತರಿಗೆ ಆಮ್ಲಜನಕದ ಆವಶ್ಯಕತೆ ಇದೆ. ತೀವ್ರ ತೀವ್ರ ಉಸಿರಾಟದ ಕಾಯಿಲೆ (ಸಾರಿ) ಹೊಂದಿರುವ ರೋಗಿಗಳು ಹೆಚ್ಚು ಅಪಾಯದಲ್ಲಿದ್ದಾರೆ. ಹೀಗಾಗಿ ನಾವು ತೀವ್ರ ಎಚ್ಚರಿಕೆಯಿಂದ  ಇರಬೇಕು. 

ಆಸ್ಪತ್ರೆಗೆ ದಾಖಲಾಗುವ ಸಾರಿ ರೋಗಿಗಳಲ್ಲಿ ಬಹುತೇಕ ಅಂದರೆ ಶೇ.92 ಮಂದಿ ಕೋವಿಡ್ ಸೋಂಕಿಗೆ ತುತ್ತಾಗಿರುತ್ತಾರೆ. ಈ ಹಿಂದೆ ಕೊನೆಯ ಕ್ಷಣದಲ್ಲಿ ಅವರು ಆಸ್ಪತ್ರೆಗೆ ದಾಖಲಾಗುತ್ತಿದ್ದರಿಂದ ಸಾವಿನ ಸಾಧ್ಯತೆ ಹೆಚ್ಚಿತ್ತು. ಇದೀಗ ಇಂತಹ ಸಾವಿನ ಪ್ರಮಾಣ ತಗ್ಗಿದೆ. ಅಂತೆಯೇ ಪ್ರಕರಣಗಳೂ ಕೂಡ ತಗ್ಗಿವೆ  ಎಂದು ಹೇಳಿದ್ದಾರೆ.

ಇದೇ ವೇಳೆ ಎಲ್ಲಿಯವರೆಗೂ ಜನರು ಮುಂಜಾಗ್ರತೆ ತೆಗೆದುಕೊಳ್ಳುವುದಿವಲ್ಲವೋ ಅಥವಾ ತಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸುವುದಿಲ್ಲವೋ ಅಲ್ಲಿಯವರೆಗೂ ಆರೋಗ್ಯ ಇಲಾಖೆ, ವೈದ್ಯರು, ವೈದ್ಯಕೀಯ ಸಿಬ್ಬಂದಿಗಳ ಶ್ರಮ ವ್ಯರ್ಥವಾಗುತ್ತಿರುತ್ತದೆ ಎಂದು ಮನೋಜ್ ಕುಮಾರ್ ಹೇಳಿದ್ದಾರೆ.

SCROLL FOR NEXT