ರಾಜ್ಯ

ಅತಿವೃಷ್ಟಿಯಿಂದ ಬಾಗಲಕೋಟೆ ಜಿಲ್ಲೆಯಲ್ಲಿ 1500 ಕೋಟಿ ರೂ. ಗಳಿಗೂ ಹೆಚ್ಚು ಹಾನಿ: ಕಾರಜೋಳ

Srinivas Rao BV

ಬಾಗಲಕೋಟೆ: ಜಿಲ್ಲೆಯಲ್ಲಿ ಜು. 25 ರಿಂದ ಅ.15 ವರೆಗೆ ಸುರಿದ ಮಳೆ ಹಾಗೂ ಪ್ರವಾಹದಿಂದ ಕೃಷಿ, ತೋಟಗಾರಿಕೆ, ರೇಷ್ಮೆ, ಲೋಕೋಪಯೋಗಿ, ಪಂಚಾಯತ್ ರಾಜ್ ಸೇರಿ ಇತರೆ ಇಲಾಖೆಗಳಿಗೆ ಸಂಬಂಧಿಸಿ ಒಟ್ಟು 1500 ಕೋಟಿ ರೂ.ಗಳಿಗೂ ಹೆಚ್ಚು ಹಾನಿಯಾಗಿದೆ ಎಂದು‌ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ವಿದ್ಯಾಗಿರಿಯ ಬಿವಿವ ಸಂಘದ ಇಂಜಿನಿಯರ್ ಕಾಲೇಜಿನ ಸಭಾಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲೆಯ ಅತಿವೃಷ್ಟಿ ಪ್ರವಾಹದಿಂದಾದ ಹಾನಿ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೃಷಿ 65489 ಹೆಕ್ಟೇರ್, ತೋಟಗಾರಿಕೆ 47036 ಹೆಕ್ಟೇರ್ ಹಾಗೂ ರೇಷ್ಮೆ 8.4 ಹೆಕ್ಟೇರ್ ಹಾನಿಯಿಂದ 509.92 ಕೋಟಿ ರೂ., 5881 ಮನೆಗಳು ಹಾನಿಗೊಳಗಾಗಿದ್ದು, ಅದರಲ್ಲಿ 361 ಪೂರ್ಣ ಹಾಗೂ 5520 ಮನೆಗಳು ಭಾಗಶಃ ಹಾನಿಯಾಗಿವೆ. ಲೋಕೋಪಯೋಗಿ ಮತ್ತು ಗ್ರಾಮೀಣ ರಸ್ತೆಗಳು ಸೇರಿ ಒಟ್ಟು 1450 ಕಿ.ಮೀ ರಸ್ತೆ, 43 ನೀರಾವರಿ ಇಲಾಖೆ ಕಾಮಗಾರಿ, 128 ಶಾಲೆಗಳು, 30 ಅಂಗನವಾಡಿಗಳು, ನಗರ ಸ್ಥಳೀಯ ಸಂಸ್ಥೆಗಳ 500 ಕಿ.ಮೀ ರಸ್ತೆ, 3 ಸರ್ಕಾರಿ ಕಟ್ಟಡ ಹಾನಿಗೊಳಗಾಗಿವೆ ಎಂದು ತಿಳಿಸಿದರು.

ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಒಟ್ಟು 7.48 ಲಕ್ಷ ರೂ.ಗಳು ಹಾನಿಯಾಗಿದ್ದು, ಜಿಲ್ಲಾಧಿಕಾರಿಗಳ ಖಾತೆಯಿಂದ ತುರ್ತಾಗಿ ಪಾವತಿಸಬೇಕು ಎಂದು ಅವರು ತಿಳಿಸಿದರು. 

ಬೆಳೆ ಹಾನಿಗೆ ಸಂಬಂಧಿಸಿದಂತೆ ಅ. 17 ರಂದು ಪರಿಹಾರ ತಂತ್ರಾಂಶದ ಮೂಲಕ ಬಾಗಲಕೋಟೆ ಜಿಲ್ಲೆಯ 7373 ಫಲಾನುಭವಿಗಳಿಗೆ 728 ಲಕ್ಷ ರೂ.ಗಳ ಇನ್ಪುೋಟ್ ಸಬ್ಸಿಡಿ ಹಣವನ್ನು ಜಮೆ ಮಾಡಲಾಗಿದೆ. ಜಂಟಿ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದ್ದು, ಈಗಾಗಲೇ ರಾಜೀವ್ಗಾಂ ಧಿ ವಸತಿ ನಿಗಮದ ತಂತ್ರಾಂಶದಲ್ಲಿ 528 ಫಲಾನುಭವಿಗಳ ಮಾಹಿತಿಯನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.

ಹಾನಿ ಸಮೀಕ್ಷೆ ಮಾಡಿ ಅಂದಾಜು ಪಟ್ಟಿಯ ವರದಿಯನ್ನು ತುರ್ತಾಗಿ ಸಲ್ಲಿಸಬೇಕು ಎಂದು ಅವರು ಸೂಚಿಸಿದರು.
ಸರ್ಕಾರಕ್ಕೆ ಮನೆ, ಬೆಳೆ ಹಾನಿಗೆ ಪರಿಹಾರ ನೀಡುವಲ್ಲಿ ನಿರ್ಲಕ್ಷ್ಯ ತೋರುವುದಿಲ್ಲ. ಕೇಂದ್ರ ಸರ್ಕಾರದಿಂದ ಹೆಚ್ಚಿನ ಪರಿಹಾರ ಪಡೆಯುವಲ್ಲಿ ಎಲ್ಲಾ ರೀತಿಯ ಪ್ರಯತ್ನ ಮಾಡುವುದಾಗಿ ಅವರು ತಿಳಿಸಿದರು. 

ವಿವಿಧ ಇಲಾಖೆಯ ಅಧಿಕಾರಿ ತಮ್ಮ ತಮ್ಮ ಇಲಾಖೆಯಿಂದ ಹಾನಿಯ ವಿವರವನ್ನು ಸಭೆಯ ಮುಂದಿಟ್ಟರು. ಸಭೆಯಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕರಾದ ವೀರಣ್ಣ ಚರಂತಿಮಠ, ದೊಡ್ಡನಗೌಡ ಪಾಟೀಲ್, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿ.ಪಂ ಸಿಇಓ ಟಿ.ಭೂಬಾಲನ, ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಯಶವಂತ ಗುರುಕಾರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

SCROLL FOR NEXT