ರಾಜ್ಯ

ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆ; ವಾಹನ ಸವಾರರ ಪರದಾಟ-ವಿಡಿಯೋ

Nagaraja AB

ಬೆಂಗಳೂರು: ಬೆಂಗಳೂರು ನಗರದಲ್ಲಿ ಶುಕ್ರವಾರ ಸಂಜೆ ಗುಡುಗು ಸಹಿತ ಧಾರಾಕಾರ ಮಳೆಯಾಗಿದ್ದು, ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಸಾರ್ವಜನಿಕರು, ವಾಹನ ಸವಾರರು ಪರದಾಡುವಂತಾಯಿತು.

ವಿಧಾನಸೌಧ, ಕೆ.ಆರ್.ವೃತ್ತ, ಶಿವಾಜಿನಗರ, ಲಾಲ್ ಬಾಗ್ ರಸ್ತೆ, ಕೆಂಗಲ್ ಹನುಮಂತಯ್ಯ ರಸ್ತೆ, ಜಯನಗರ, ಜೆ.ಪಿ.ನಗರ, ಮೆಜೆಸ್ಟಿಕ್, ಸಿಟಿ ಮಾರುಕಟ್ಟೆ, ಹೆಬ್ಬಾಳ, ಎಚ್ ಎಎಲ್ ಸೇರಿದಂತೆ ನಗರದ ಹಲವೆಡೆ ಭಾರೀ ಮಳೆಯಾಗಿದೆ.

ಲಾಲ್ ಬಾಗ್ ರಸ್ತೆಯಲ್ಲಿ ನೀರು ಹೊಳೆಯಂತೆ ಹರಿದ ಪರಿಣಾಮ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡುವಂತಾಯಿತು. ಅದರಲ್ಲೂ ದ್ವಿಚಕ್ರ ವಾಹನ ಸವಾರರು ತೀವ್ರ ಸಂಕಷ್ಟಕ್ಕೆ ಗುರಿಯಾಗಬೇಕಾಯಿತು. 
ಉಕ್ಕಿಹರಿಯುತ್ತಿದ್ದ ನೀರಿನಲ್ಲಿ ವಾಹನ ಚಲಾಯಿಸಲು ಹರ ಸಾಹಸಪಡಬೇಕಾಯಿತು. 

ಹೊಸಕೆರೆ ಹಳ್ಳಿಯ ದತ್ತಾತ್ರೇಯ ಬಡಾವಣೆ ಸೇರಿದಂತೆ ವಿವಿಧಡೆ ಮನೆಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ತೊಂದರೆ ಅನುಭವಿಸಬೇಕಾಯಿತು. ಕೆಲವೆಡೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ಮ್ಯಾನ್ ಹೋಲ್ ಗಳಲ್ಲಿ ನೀರು ರಸ್ತೆಯ ಮೇಲೆ ಹರಿದುಕ್ಕಿತು. 

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಇನ್ನೂ ಎರಡು ದಿನ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇನ್ನೇರಡು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ.

SCROLL FOR NEXT