ರಾಜ್ಯ

ಕೊರೋನಾ ಲಸಿಕೆ ವಿತರಣೆಯ ಸಿದ್ಧತೆಗಳ ಕುರಿತು ಮುಂದಿನ ವಾರ ಉನ್ನತ ಮಟ್ಟದ ಸಭೆ: ಸಚಿವ ಸುಧಾಕರ್

Manjula VN

ಬೆಂಗಳೂರು: ಕೊರೋನಾ ಲಸಿಕೆ ಲಭ್ಯವಾಗುತ್ತಿದ್ದಂತೆಯೇ ವಿತರಣೆಯ ಸಿದ್ಧತೆಗಳ ಕುರಿತು ಮುಂದಿನ ವಾರ ಉನ್ನತ ಮಟ್ಟದ ಸಭೆ ನಡೆಸಲಾಗುತ್ತದೆ ಎಂದು ಸಚಿವ ಸುಧಾಕರ್ ಅವರು ಹೇಳಿದ್ದಾರೆ. 

ಕೊರೋನಾ ಲಸಿಕೆಯನ್ನು ಉಚಿತವಾಗಿ ನೀಡುವ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ಕೈಗೊಳ್ಳಲಿದ್ದಾರೆ. ರಾಜ್ಯ ಆರೋಗ್ಯ ವ್ಯವಸ್ಥೆ ವಿಶಾಲವಾದ ಸಂಪರ್ಕಗಳನ್ನು ಹೊಂದಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಅಂಗನವಾಡಿಗಳ ಮೂಲಕ ಲಸಿಕೆ ಲಭ್ಯವಾಗುತ್ತಿದ್ದಂತೆಯೇ ಪ್ರತೀ ನಾಗರೀಕನಿಗೂ ಲಭ್ಯವಾಗುವಂತೆ ಮಾಡಲಾಗುತ್ತದೆ. ರಾಜ್ಯದಲ್ಲಿ ಲಸಿಕೆ ವಿತರಣೆ ಮಾಡುವ ಕುರಿತು ಸಿದ್ಥತೆಗಳನ್ನು ನಡೆಸಲು ಮುಂದಿನ ವಾರ ಉನ್ನತ ಮಟ್ಟದ ಸಭೆ ಕರೆಯಲಾಗಿದೆ ಎಂದು ಹೇಳಿದ್ದಾರೆ. 

2021ರ ಜನವರಿ ತಿಂಗಳಿನಲ್ಲಿ ಲಸಿಕೆ ಲಭ್ಯವಾಗುವ ನಿರೀಕ್ಷೆಗಳಿವೆ. ಇದಕ್ಕಾಗಿ ಸರ್ಕಾರ ಸಿದ್ಧತೆಗಳನ್ನೂ ನಡೆಸುತ್ತಿದೆ. ಮಕ್ಕಳಿಗೆ ರೋಗನಿರೋಧಕ ಶಕ್ತಿ ನೀಡುವಲ್ಲಿ ಭಾರತಕ್ಕೆ ಅಪಾರ ಅನುಭವವಿದ್ದರೂ, ಕೆಲವು ಪಾಶ್ಚಿಮಾತ್ಯ ದೇಶಗಳಲ್ಲಿ ಮಕ್ಕಳಿಗೆ ನೀಡಲಾಗುತ್ತಿರುವ ಲಸಿಕೆಗಳ ಬಗ್ಗೆ ನಮಗೆ ಅನುಭವವಿಲ್ಲ ಎಂಬುದೇ ದೊಡ್ಡ ಸವಾಲಾಗಿದೆ. ಲಸಿಕೆ ಸಿದ್ಧವಾದ ನಂತರ ಅವುಗಳನ್ನು ವಿತರಿಸುವ ಕಾರ್ಯವನ್ನು ಕೇಂದ್ರ ಸರ್ಕಾರ ನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ. 

ರಾಜ್ಯ ಆರೋಗ್ಯ ಆಯುಕ್ತ ಪಂಕಜ್ ಪಾಂಡೆ ಮಾತನಾಡಿ, ಲಸಿಕೆಯು ಇನ್ನೂ ಪ್ರಯೋಗದ ಹಂತದಲ್ಲಿಯೇ ಇದೆ. ಭಾರತ ಸರ್ಕಾರವು ಲಸಿಕೆಯ ಪ್ರಕ್ರಿಯೆಗಳನ್ನು ನಡೆಸುತ್ತಿದ್ದು, ಲಸಿಕೆ ಬಂದ ಕೂಡಲೇ ಬೆಲೆ ಸೇರಿದಂತೆ ಕೆಲವು ನೀತಿ ವಿಷಯಗಳ ಬಗ್ಗೆ ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದಿದ್ದಾರೆ. 

SCROLL FOR NEXT