ರಾಜ್ಯ

ಕೋವಿಡ್-19 ಸ್ಥಿತಿಗತಿಗೆ ನಿರ್ಣಾಯಕವಾಗಲಿದೆ ಮುಂದಿನ ಎರಡು ತಿಂಗಳು

Lingaraj Badiger

ಬೆಂಗಳೂರು: ಮುಂದಿನ ಎರಡು ತಿಂಗಳು ರಾಜ್ಯದ ಕೋವಿಡ್‌-19 ಸ್ಥಿತಿಗತಿ ನಿರ್ವಹಣೆಗೆ ನಿರ್ಣಾಯಕವಾಗಲಿದೆಯೇ?
ಹೌದು, ಎನ್ನುತ್ತಿದೆ ತಜ್ಞ ವೈದ್ಯರ ತಂಡ.

ದೇಶ ಹಾಗೂ ರಾಜ್ಯದಲ್ಲಿ ಕೋವಿಡ್‌ ಸೋಂಕು ಯಾವಾಗ ಇಳಿಮುಖವಾಗುತ್ತದೆ ಎಂಬ ಪ್ರಶ್ನೆಗಳಿಗೆ ಉತ್ತರ ದೊರೆಯಲು ಇನ್ನೂ ಕನಿಷ್ಠ ಎರಡು ತಿಂಗಳಂತೂ ಕಾಯಲೇಬೇಕು ಎನ್ನುತ್ತಾರೆ ವೈದ್ಯರು.

ಅಕ್ಟೋಬರ್‌ ಮಧ್ಯಂತರದಿಂದ ಸಾಲು ಸಾಲಾಗಿ ಬರುತ್ತಿರುವ ಹಬ್ಬಗಳು ಮತ್ತು ರೋಗರುಜಿನಗಳನ್ನು ತನ್ನೊಂದಿಗೆ ಹೊತ್ತು ತರುವ ಚಳಿಗಾಲ ಸೋಂಕು ಹೆಚ್ಚಳಕ್ಕೆ ಪ್ರಮುಖ ಕಾರಣಗಳಾಗಲಿವೆ. ಸರ್ಕಾರ ಹಬ್ಬದ ಮಾರ್ಗಸೂಚಿ ಬಿಡುಗಡೆಗೊಳಿಸಿದ ನಂತರವೂ, ನವರಾತ್ರಿಯ ನವದಿನಗಳಲ್ಲಿ ಭಕ್ತರು ಸೋಂಕಿನ ಭೀತಿ ಲಕ್ಷಿಸದೆ ದೇಗುಲಗಳಿಗೆ ಭೇಟಿ ನೀಡುತ್ತಿರುವುದು ಇದಕ್ಕೆ ನಮ್ಮ ಕಣ್ಣ ಮುಂದೆಯೇ ಇರುವ ಪ್ರತ್ಯಕ್ಷ ಸಾಕ್ಷಿಯಾಗಿದೆ.

ನವೆಂಬರ್‌ ಮಧ್ಯಂತರದಲ್ಲಿ ಬರುವ ದೀಪಾವಳಿ ಹಬ್ಬ ಅತಿ ಹೆಚ್ಚು ಜನರು ತಮ್ಮ ಮನೆಯಿಂದ ಹೊರಬರಲು ಪ್ರೇರೇಪಿಸುವ ಸಾಧ್ಯತೆಯಿದೆ. ಕಳೆದ ಐದಾರು ತಿಂಗಳಿಂದ ತಮ್ಮ ಸಂಪರ್ಕಗಳನ್ನು ಸೀಮಿತಗೊಳಿಸಿದವರು, ದೀಪಾವಳಿ ಹಬ್ಬದ ಪ್ರಯುಕ್ತ ವಾಡಿಕೆಯಂತೆ ಆಪ್ತರ, ಸಂಬಂಧಿಕರ ಮನೆಗಳಿಗೆ ಭೇಟಿ ನೀಡಲು ಮುಂದಾದಲ್ಲಿ, ಕೋವಿಡ್‌ ಸೋಂಕು ವೇಗವಾಗಿ ವ್ಯಾಪಿಸುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದಲ್ಲಿ ಕಳೆದ ಎರಡು ತಿಂಗಳಲ್ಲಿ ಕೊರೋನಾ ದಿನಕ್ಕೆ ಹತ್ತು ಸಾವಿರಕ್ಕೂ ಮೀರಿ ದಾಖಲಾಗುತ್ತಿದ್ದುದು ಜನರಲ್ಲಿ ಭಾರಿ ಆತಂಕಕ್ಕೆ ಕಾರಣವಾಗಿತ್ತು. ಆದರೆ, ಕಳೆದ ನಾಲ್ಕೈದು ದಿನಗಳಲ್ಲಿ ಆ ಸಂಖ್ಯೆ ದಿನಕ್ಕೆ 5 ಸಾವಿರದ ಆಸುಪಾಸು ತಲುಪಿದೆ. ಇದು ಜನರಿಗೆ ನಿರಾಳತೆ ತಂದಿದೆಯಾದರೂ, ಇದರ ಆಧಾರದ ಮೇಲೆ ಮೈಮರೆಯಬಾರದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಶ್ವಾಸಕೋಶ ಸಮಸ್ಯೆಗಳು ಹೆಚ್ಚು
ವೈಟ್‌ಫೀಲ್ಡ್‌ನ ಮಣಿಪಾಲ್‌ ಆಸ್ಪತ್ರೆಯ ವೈದ್ಯೆ ಡಾ.ರೇಷು ಅಗರ್ವಾಲ್‌ ಪ್ರಕಾರ, ಚಳಿಗಾಲದಲ್ಲಿ ಸಾಮಾನ್ಯವಾಗಿ ವೈರಲ್‌ಜ್ವರ ಮತ್ತು ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತವೆ. ಈ ಬಾರಿ ಕೋವಿಡ್‌ ಭೀತಿ ಕೂಡ ಇರುವುದರಿಂದ ಜನರು ಸಾಕಷ್ಟು ಎಚ್ಚರಿಕೆಯಿಂದಿರುವುದು ಅತಿ ಅಗತ್ಯ. ಆದರೆ, ಹಬ್ಬದ ಸಂದರ್ಭದಲ್ಲಿ ಜನರನ್ನು ಮನೆಯಲ್ಲಿಯೇ ಇರುವಂತೆ ಮಾಡುವುದು ಸುಲಭವಲ್ಲ ಎಂದಿದ್ದಾರೆ.

ಸದ್ಯ ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ 7.93 ಲಕ್ಷ ತಲುಪಿದ್ದು, 6.90 ಲಕ್ಷ ಜನರು ಚೇತರಿಸಿಕೊಂಡಿದ್ದಾರೆ. ಚೇತರಿಕೆಯ ಪ್ರಮಾಣ ಉತ್ತಮವಾಗಿಯೇ ಇದೆಯಾದರೂ, ಮರಣ ಪ್ರಮಾಣ ಕೂಡ ಆತಂಕಕಾರಿಯಾಗಿಯೇ ಮುಂದುವರಿದಿದೆ.

ಕೇರಳದ ಓಣಂ ಹಬ್ಬದ ಆಚರಣೆ ಕೋವಿಡ್‌ ಪ್ರಕರಣಗಳ ಏರಿಕೆಗೆ ಕಾರಣವಾಗಿದ್ದನ್ನು ಜನರು ಎಚ್ಚರಿಕೆ ಎಂದು ಪರಿಗಣಿಸಬೇಕು. ಹಬ್ಬಗಳ ಕಾಲ ಜನರ ಸಮ್ಮಿಲನಕ್ಕೆ ಒಂದು ವೇದಿಕೆಯಾಗುತ್ತದೆ. ಆದರೆ, ಅದು ಸೋಂಕು ವೇಗವಾಗಿ ವ್ಯಾಪಿಸಲು ಕೂಡ ನೆವವಾಗಿ ಪರಿಣಮಿಸಬಾರದು.
-ಡಾ.ರೇಷು ಅಗರ್ವಾಲ್‌, ವೈಟ್‌ಫೀಲ್ಡ್‌ನ ಮಣಿಪಾಲ್‌ ಆಸ್ಪತ್ರೆಯ ವೈದ್ಯೆ

SCROLL FOR NEXT