ರಾಜ್ಯ

ಮೈಸೂರು ದಸರಾ ಜಂಬೂಸವಾರಿ: ಅರಮನೆಗೆ ಪೊಲೀಸ್ ಬಿಗಿಭದ್ರತೆ

Manjula VN

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2020ರ ಅಂಗವಾಗಿ, ನಾಳೆ ಜಂಬೂ ಸವಾರಿ ಮೆರವಣಿಗೆ ನಡೆಯಲಿದ್ದು, ಅರಮನೆ ಆವರಣಕ್ಕೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.

ಐತಿಹಾಸಿಕ ಅರಮನೆಗೆ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಅರಮನೆಯಂಗಳದಲ್ಲಿ ಸಿಬ್ಬಂದಿಗಳ ನಿಯೋಜನೆ ಪ್ರಕ್ರಿಯೆ ಆರಂಭಗೊಂಡಿದೆ. 

ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಜಂಬೂ ಸವಾರಿಗೆ ಭದ್ರತೆ ಒದಗಿಸಲಾಗಿದೆ. ಕೊರೋನಾದಿಂದ ಅರಮನೆಯಂಗಳಕ್ಕೆ ಮಾತ್ರ ಜಂಬೂ ಸವಾರಿ ಸೀಮಿತವಾಗಿದೆ.ಅರಮನೆಯ ಆರು ದ್ವಾರಗಳಿಗೆ 300 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿ ಕೇವಲ ಆಚರಣೆಗೆ ಮಾತ್ರ ಜಂಬೂಸವಾರಿ ಸೀಮಿತವಾಗಿದೆ. ಕೇವಲ ಅರಮನೆಯ ಆವರಣದಲ್ಲಿ ಮಾತ್ರ ಮೆರವಣಿಗೆ ಸಾಗಲಿದೆ.

ಪ್ರತಿವರ್ಷ ಅರಮನೆಯಿಂದ ಆರಂಭವಾಗುತ್ತಿದ್ದ ಜಂಬೂಸವಾರಿ ಸುಮಾರು 5 ಕಿಲೋ‌ ಮೀಟರ್ ವರೆಗೂ ಸಾಗಿ ಬನ್ನಿಮಂಟಪದ ಪಂಜಿನ ಕವಾಯಿತು ಮೈದಾನದಲ್ಲಿ ಕೊನೆಯಾಗುತ್ತಿತ್ತು. ಈ ಬಾರಿ ಅದು ಕೇವಲ 450 ಮೀಟರ್‌ಗೆ ಸೀಮಿತವಾಗಿದೆ. ಇನ್ನು ಪ್ರತಿ ಬಾರಿ ದಸರೆಯ ಪ್ರಮುಖ ಆಕರ್ಷಣೆ ಅಂದ್ರೆ ಅದು ಗಜಪಡೆಯ ಜಂಬೂಸವಾರಿ. ಪ್ರತಿ ವರ್ಷ 12 ರಿಂದ 13 ಆನೆಗಳು ದಸರಾ ಜಂಬೂಸವಾರಿಯಲ್ಲಿ ಭಾಗವಹಿಸುತ್ತಿದ್ದವು.

ಆದರೆ ಈ ಬಾರಿ ಕೇವಲ‌ 5 ಆನೆಗಳು ಮಾತ್ರ ದಸರಾ ಜಂಬೂಸವಾರಿಯಲ್ಲಿ ಭಾಗವಹಿಸುತ್ತಿವೆ. ಜಂಬೂಸವಾರಿ ವೀಕ್ಷಣಗೆ ಹೊರ ರಾಜ್ಯಗಳಿಂದ, ದೇಶ ವಿದೇಶಗಳ ಪ್ರವಾಸಿಗರಿಗೆ ಪ್ರವೇಶವಿಲ್ಲ. ಅರಮನೆಯಲ್ಲಿ ನಡೆಯುವ ಜಂಬೂಸವಾರಿ ವೀಕ್ಷಿಸಲು 300 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಉಳಿದವರು ಕೇವಲ ಸಾಮಾಜಿಕ‌ ಜಾಲತಾಣ ಹಾಗೂ ಮಾಧ್ಯಮದ‌ ಮೂಲಕ ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿದೆ.

SCROLL FOR NEXT