ರಾಜ್ಯ

ಎಲ್ಲೆಂದರಲ್ಲಿ ಕಸ ಎಸೆದವರಿಂದ 5 ತಿಂಗಳಲ್ಲಿ ರೂ.75 ಲಕ್ಷ ವಸೂಲಿ ಮಾಡಿದ ಬಿಬಿಎಂಪಿ

Manjula VN

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಘನತ್ಯಾಜ್ಯ ಎಸೆಯುವವರು, ಮೂತ್ರ ವಿಸರ್ಜನೆ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಬಿಬಿಎಂಪಿ ಕಳೆದ ಐದು ತಿಂಗಳುಗಳಲ್ಲಿ ರೂ.75 ಲಕ್ಷ ದಂಡ ವಸೂಲಿ ಮಾಡಿದೆ. 

ಘನ ತ್ಯಾಜ್ಯ ನಿಯಮ ಉಲ್ಲಂಘಿಸುವವರ ವಿರುದ್ಧ ಕಾರ್ಯಾಚರಣೆಗೆ 250 ಮಂದಿ ಮಾರ್ಷಲ್'ಗಳನ್ನು ನೇಮಿಸಲಾಗಿತ್ತಾದರೂ ಕೊರೋನಾ ಹಿನ್ನೆಲೆಯಲ್ಲಿ ಅವರನ್ನು ಕೋವಿಡ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಈ ನಡುವೆ ಘನತ್ಯಾಜ್ಯ ನಿರ್ವಹಣೆಗೆ ಪ್ರತ್ಯೇಕವಾಗಿ 250 ಮಂದಗಿ ಮಾರ್ಷಲ್'ಗಳನ್ನು ನೇಮಿಸಲಾಗಿದೆ. ಅಂತೆಯೇ ಬಿಬಿಎಂಪಿಯ ಎಂಟು ವಲಯಗಳಿಗೂ ಎಂಟು ಗಸ್ತು ವಾಹನಗಳನ್ನು ನಿಯೋಜಿಸಿದ್ದು, ಎಲ್ಲೆಂದರಲ್ಲಿ ಕಸ ಎಸೆಯುವವರ, ಮೂತ್ರ ವಿಸರ್ಜನೆ ಮಾಡುವವವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಅವರು ತಿಳಿಸಿದ್ದಾರೆ. 

ಈ ಹಿಂದೆ ಎಲ್ಲೆಂದರಲ್ಲಿ ಕಸ ಎಸೆದವರಿಗೆ ರೂ.200 ದಂಡ ವಿಧಿಸಲಾಗುತ್ತಿತ್ತು. ಕಳೆದ ಜೂನ್ ನಿಂದ ದಂಡದ ಮೊತ್ತವನ್ನು ರೂ.1 ಸಾವಿರ ಏರಿಕೆ ಮಾಡಲಾಗಿದೆ. ಎರಡನೇ ಬಾರಿ ಸಿಕ್ಕಿ ಹಾಕಿಕೊಂಡವರಿಗೆ ರೂ.2 ಸಾವಿರ ದಂಡ ವಿಧಿಸಲಾಗುತ್ತಿದೆ. ಇನ್ನು ಕಸ ವಿಂಗಡಣೆ ಮಾಡದವರಿಗೆ ಮೊದಲ ಬಾರಿಗೆ ರೂ.1 ಸಾವಿರ, 2ನೇ ಬಾರಿಗೆ ರೂ.2 ಸಾವಿರ ದಂಡ ವಿಧಿಸಲಾಗುತ್ತಿದೆ. ಕಸ ಸಂಗ್ರಹಿಸುವವರು ವಿಂಗಡಿಸದ ಕಸವನ್ನು ಪಡೆದರೆ ಅವರಿಗೂ ದಂಡ ವಿಧಿಸಲಾಗುತ್ತಿದೆ ಎಂದಿದ್ದಾರೆ. 

SCROLL FOR NEXT