ವಿಧಾನಸೌಧ 
ರಾಜ್ಯ

62 ಕ್ರಿಮಿನಲ್ ಪ್ರಕರಣ ಹಿಂಪಡೆದ ಸರ್ಕಾರ: ಹೋರಾಟಗಾರರ ಹೆಸರಲ್ಲಿ ಬಿಜೆಪಿ ನಾಯಕರ ಮೇಲಿನ ಗಂಭೀರ ಪ್ರಕರಣಗಳೂ ವಾಪಸ್!

ಬಿಜೆಪಿ ಸರ್ಕಾರ ಈಗಾಗಲೇ ರೈತ ಪ್ರತಿಭಟನೆಗಳು, ಮಹದಾಯಿ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲು ನಿರ್ಧರಿಸಿದೆ. ಆದರೆ ಹೋರಾಟಗಾರರ ಹೆಸರಲ್ಲಿ ಸರ್ಕಾರ ತನ್ನ ಪಕ್ಷದ ಕಾರ್ಯಕರ್ತರು, ಬಿಜೆಪಿ ನಾಯಕರ ವಿರುದ್ಧದ ಪ್ರಕರಣಗಳನ್ನೂ ಹಿಂಪಡೆದಿರುವುದು ವಿವಾದಕ್ಕೆ ಕಾರಣವಾಗಿದೆ. 

ಬೆಂಗಳೂರು: ಬಿಜೆಪಿ ಸರ್ಕಾರ ಈಗಾಗಲೇ ರೈತ ಪ್ರತಿಭಟನೆಗಳು, ಮಹದಾಯಿ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲು ನಿರ್ಧರಿಸಿದೆ. ಆದರೆ ಹೋರಾಟಗಾರರ ಹೆಸರಲ್ಲಿ ಸರ್ಕಾರ ತನ್ನ ಪಕ್ಷದ ಕಾರ್ಯಕರ್ತರು, ಬಿಜೆಪಿ ನಾಯಕರ ವಿರುದ್ಧದ ಪ್ರಕರಣಗಳನ್ನೂ ಹಿಂಪಡೆದಿರುವುದು ವಿವಾದಕ್ಕೆ ಕಾರಣವಾಗಿದೆ. 

ರೈತರ ಪರ, ಸಾಮಾಜಿಕ ಕಳಕಳಿ ಹಿನ್ನೆಲೆಯ ಪ್ರತಿಭಟನೆ, ಹರತಾಳ ನಡೆಸಿದವರ ಮೇಲಿನ ಪ್ರಕರಣಗಳನ್ನು ವಾಪಸ್ಸು ಪಡೆಯುವುದು ಸಾಮಾನ್ಯ ಸಂಗತಿ. ಆದರೆ ಸಾಮಾಜಿಕ ಕಳಕಳಿ ಹೆಸರಿನಲ್ಲಿ ಸಂಘಟನೆಗಳು, ಪಕ್ಷದ ಕಾರ್ಯಕರ್ತರು ಮೇಲಿರುವ ಪ್ರಕರಣಗಳನ್ನು ವಾಪಾಸು ಪಡೆಯುವ ಮೂಲಕ ಅವರ ಕೃತ್ಯಗಳನ್ನು ಮುಚ್ಚಿ ಹಾಕಲು, ಆ ಮೂಲಕ ಅಂತಹ ಸಂಘಟನೆ ಮತ್ತು ವ್ಯಕ್ತಿಗಳನ್ನು ಸಮರ್ಥಿಸಿಕೊಳ್ಳುವ ಕೆಲಸಕ್ಕೆ ಸರ್ಕಾರ ಬಹಿರಂಗವಾಗಿಯೇ ಕೈಹಾಕಿದೆ. ಕಳೆದ ವಾರ ನಡೆದ ಸಂಪುಟ ಸಭೆಯಲ್ಲಿ ಸರ್ಕಾರ 62 ಕ್ರಿಮಿನಲ್ ಮೊಕದ್ದಮೆಗಳನ್ನು ವಾಪಾಸು ಪಡೆಯಲು ಅನುಮೋದನೆ ನೀಡಿದೆ.

ಹುಣಸೂರು ವಿದ್ಯಾರ್ಥಿಗಳ ಪ್ರಕರಣ, ಬೆಳಗಾವಿ ನಗರ ಮಾರ್ಕೆಟ್ ಗಲಾಟೆ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗಿದ್ದರೆ, ವೈಯಕ್ತಿಕ ಪ್ರಕರಣಗಳು ಹಾಗೂ ಗಂಭೀರ ಸ್ವರೂಪದ ಮೊಕದ್ದಮೆಗಳನ್ನು ವಾಪಸ್ ಪಡೆದಿಲ್ಲ ಎಂದು ಸರ್ಕಾರ ಸಮಜಾಯಿಶಿ ನೀಡಿತ್ತು. ಆದರೆ ಹೋರಾಟಗಾರರ ಹೆಸರಲ್ಲಿ ಸರ್ಕಾರ ತನ್ನ ಪಕ್ಷದ ಪ್ರಮುಖ ನಾಯಕರು ಹಾಗೂ ಕಾರ್ಯಕರ್ತರ ವಿರುದ್ಧದ ಗಂಭೀರ ಸ್ವರೂಪದ ಪ್ರಕರಣಗಳನ್ನೂ ಹಿಂದಕ್ಕೆ ಪಡೆದುಕೊಂಡಿದೆ. ಈ ಬಹುತೇಕ ಕ್ರಿಮಿನಲ್ ಪ್ರಕರಣಗಳು ಗಂಭೀರ ಸ್ವರೂಪದ್ದಾಗಿವೆ. ಡಿಜಿ-ಐಜಿಪಿ ಕಚೇರಿ, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ, ಕಾನೂನು ಇಲಾಖೆ ಬಹುತೇಕ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವುದು ಸೂಕ್ತವಲ್ಲ ಎಂಬ ಅಭಿಪ್ರಾಯವ್ಯಕ್ತಡಿಸಿದೆ. ಆದರೆ ಜುಲೈ 22ರಂದು ನಡೆದ  ಸಂಪುಟ ಉಪ ಸಮಿತಿ ಸಭೆಯಲ್ಲಿ 62 ಪ್ರಕರಣಗಳನ್ನು ಹಿಂಪಡೆಯುವುದು ಸೂಕ್ತ ಎಂದು ಸಂಪುಟ ಸಭೆಗೆ ಶಿಫಾರಸು ಮಾಡಿತ್ತು. ಅದರಂತೆ ಸಂಪುಟ ಸಭೆ 62 ರಾಜ್ಯದ ವಿವಿಧ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳನ್ನು ವಾಪಸು ಪಡೆಯಲು ಅನುಮೋದನೆ ನೀಡಿದೆ.

ಪ್ರಕರಣ ಮುಕ್ತರಾದ ಬಿಜೆಪಿ ನಾಯಕರು: ಮೊನ್ನೆ ಆ.20ಕ್ಕೆ ನಡೆದ ಸಂಪುಟ ಸಭೆಯಲ್ಲಿ ಸರ್ಕಾರ ಒಟ್ಟು 62 ಕ್ರಿಮಿನಲ್ ಪ್ರಕರಣಗಳನ್ನು ವಾಪಾಸು ಪಡೆಯಲು ತೀರ್ಮಾನಿಸಿದೆ. ಹೋರಾಟಗಾರರು, ವಿದ್ಯಾರ್ಥಿ ಗಲಾಟೆ ಹೆಸರಲ್ಲಿ ಪ್ರಕರಣ ವಾಪಾಸು ಪಡೆದಿರುವ ಅನುಮಾನಕ್ಕೆ ಕಾರಣವಾಗಿದೆ.

ಸಂಸದ ಪ್ರತಾಪ್ ಸಿಂಹ ವಿರುದ್ಧದ ಕೇಸ್ ವಾಪಸ್: ಸಂಪುಟ ಸಭೆಯಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ಮೇಲಿನ ಪ್ರಕರಣವನ್ನೂ ವಾಪಸು ಪಡೆಯಲು ತೀರ್ಮಾನಿಸಲಾಗಿದೆ. ಮೈಸೂರು ಸಂಸದ ಪ್ರತಾಪ್ ಸಿಂಹ ಡಿ.3, 2017ರಂದು ಹುಣಸೂರು ಪಟ್ಟಣದಲ್ಲಿ ಹನುಮ ಜಯಂತಿ ಪ್ರಯುಕ್ತ ರಾಲಿ ನಡೆಸಲು ಯತ್ನಿಸಿದ್ದರು. ನಿಷೇಧಾಜ್ಞೆ ಇದ್ದರೂ ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸಲು ಪ್ರಯತ್ನ ನಡೆಸಿದ್ದರು. ಈ ವೇಳೆ ಸಂಸದ ಪ್ರತಾಪ್ ಸಿಂಹ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಮೇಲೆ ಕಾರನ್ನು ವೇಗವಾಗಿ ನುಗ್ಗಿಸಿದ ಆರೋಪಕ್ಕೊಳಗಾಗಿದ್ದರು. ಈ ಸಂಬಂಧ ಬಿಳಿಕೆರೆ ಠಾಣೆಯಲ್ಲಿ ಸಂಸದ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು.  ಸಂಸದ ಪ್ರತಾಪ್ ಸಿಂಹ ವಿರುದ್ಧ ಐಪಿಸಿ 279, 353, 188 ಮತ್ತು 332ರಡಿ ಪ್ರಕರಣ ದಾಖಲಿಸಲಾಗಿತ್ತು. ಇದೀಗ ಮೊನ್ನೆ ನಡೆದ ಸಂಪುಟ ಸಭೆಯಲ್ಲಿ ಈ ಪ್ರಕರಣಗಳನ್ನು ವಾಪಸು ಪಡೆಯಲಾಗಿದೆ. ಅಲ್ಲದೆ ಹನುಮ ಜಯಂತಿ ಪ್ರಯುಕ್ತ ಮೆರವಣಿಗೆ ನಡೆಸಿದ ಹಿನ್ನೆಲೆ ಹುಣಸೂರು ಪಟ್ಟಣ ಠಾಣೆಯಲ್ಲಿ ದಾಖಲಾಗಿರುವ ಬೆಂಬಲಿಗರ ವಿರುದ್ಧದ ಪ್ರಕರಣವನ್ನೂ ವಾಪಸು ಪಡೆಯಲು ನಿರ್ಧರಿಸಲಾಗಿದೆ.

ರೇಣುಕಾಚಾರ್ಯ ಬೆಂಬಲಿಗರ ಕೇಸ್ ವಾಪಸ್: ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಬೆಂಬಲಿಗರ ವಿರುದ್ಧ ದಾಖಲಾಗಿರುವ ಮೊಕದ್ದಮೆಯನ್ನು ಸರ್ಕಾರ ಹಿಂದಕ್ಕೆ ಪಡೆದಿದೆ. ಫೆ.6, 20 19ರಂದು ದಾವಣಗೆರೆಯ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಎಂ.ಪಿ.ರೇಣುಕಾಚಾರ್ಯರ ಬೆಂಬಲಿಗರ ವಿರುದ್ಧ ಪ್ರಕರಣ ದಾಖಲಾಗಿತ್ತು. ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ರೇಣುಕಾಚಾರ್ಯರ ಜಯಗಳಿಸಿದ್ದಕ್ಕಾಗಿ ಬಿಜೆಪಿ ಬೆಂಬಲಿಗರು ಹೊನ್ನಾಳಿ ಪಟ್ಟಣದಲ್ಲಿ ಜೈಕಾರ ಹಾಕುತ್ತಾ ಅಕ್ರಮ ಗುಂಪು ಕಟ್ಟಿಕೊಂಡಿದ್ದರು. ಅಲ್ಲದೆ ಕಾಂಗ್ರೆಸ್ ಅಭ್ಯರ್ಥಿ ಎಚ್‌.ಪಿ.ಮಂಜಪ್ಪ ಮನೆ ಹತ್ತಿರ ಬೈದಾಡಿಕೊಂಡು ಸುತ್ತಾಡಿದ್ದರು. ಮುಖಂಡರ ಮನೆಯವರೊಂದಿಗೆ ಜಗಳ ಮಾಡಿ, ಹಲ್ಲೆ ಮಾಡಿ ಕೊಲೆ ಮಾಡಬೇಕೆಂಬ ಉದ್ದೇಶದಿಂದ ಮಂಜಪ್ಪ ಅವರ ಸಹೋದರನ ಅಂಗಡಿ ಮುಂದೆ ಪಟಾಕಿ ಸಿಡಿಸಲು ಹೋಗಿದ್ದರು. ಆ ವೇಳೆ ಅಲ್ಲಿ ಜಗಳವಾಡಿ ಇಬ್ಬರಿಗೆ ಚಾಕು ಇರಿದ ಆರೋಪವು ಕೇಳಿ ಬಂದಿದ್ದು ಪ್ರಕರಣ ದಾಖಲಿಸಲಾಗಿತ್ತು.

ಈ ಸಂಬಂಧ ಹೊನ್ನಾಳಿ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ 231/2018 ಕಲಂನಡಿ  143, 144, 147, 148 ಮತ್ತು 504, 307, 323, 324 ಪ್ರಕರಣ ದಾಖಲಾಗಿತ್ತು. ಈ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗಿದೆ.

ಇತರೆ ಸಚಿವ, ಶಾಸಕ ಬೆಂಬಲಿಗರ ವಿರುದ್ಧದ ಕೇಸ್ ವಾಪಸು: ಸಚಿವ ಬಿ.ಸಿ.ಪಾಟೀಲ್ ಬೆಂಬಲಿಗರ ಮೇಲೆ ಹಾವೇರಿಯ ರಟ್ಟಿಹಳ್ಳಿ ಠಾಣೆಯಲ್ಲಿ ಗಣೇಶ ವಿಸರ್ಜನೆ ವೇಳೆ ದೊಂಬಿ ನಡೆಸಿದ ಹಿನ್ನೆಲೆ ದಾಖಲಾದ ಪ್ರಕರಣ ವಾಪಸ್ ಪಡೆಯಲಾಗಿದೆ. ಸರ್ಕಾರಿ ವಾಹನ ಜಖಂ, ಆಸ್ತಿಪಾಸ್ತಿ ನಾಶ, ಅಧಿಕಾರೊಗಳಿಗೆ ಗಾಯ ಮಾಡಿದ ಗಂಭೀರ ಆರೋಪ ಇತ್ತು. ಪ್ರಕರಣ ವಾಪಸು ಪಡೆಯಲು ಸಚಿವರು ಮನವಿ ಮಾಡಿದ್ದರು.

- ಮೈಸೂರು ಹುಣಸೂರಿನಲ್ಲಿ ಹನುಮ ಜಯಂತಿ ಮೆರವಣಿಗೆ ವೇಳೆ ದಾಂಧಲೆ ನಡೆಸಿ, ಕೋಮು ಗಭೆಗೆ ಪ್ರಚೋದಿಸಿದ ಆರೋಪದಡಿ ಹಿಂದೂ ಕಾರ್ಯಕರ್ತರ ಮೇಲಿನ ಪ್ರಕರಣಗಳು ವಾಪಸು.

- ಧಾರವಾಡ ಬಿಜೆಪಿ ಶಾಸಕ ಅಮೃತ್ ದೇಸಾಯಿ ಬೆಂಬಲಿಗರಿಂದ 2015ರಲ್ಲಿ ಗಣೇಶ ವಿಸರ್ಜನೆ ವೇಳೆ ಮಸೀದಿಗಳಿಗೆ ಕಲ್ಲು ತೂರಾಟ ಮಾಡಿ, ಜೀವ ಬೆದರಿಕೆ ಹಾಕಿದ ಪ್ರಕರಣ ವಾಪಸ್.

ಹೀಗೆ ಪೊಲೀಸ್ ಇಲಾಖೆ, ಕಾನೂನು ಇಲಾಖೆ ಪ್ರಕರಣ ವಾಪಸ್ ಪಡೆಯಬಾರದೆಂದು ಸೂಚಿಸಿದ್ದರೂ ಸರ್ಕಾರ ಪಕ್ಷ ಹಾಗೂ ಪಕ್ಷದ ಕಾರ್ಯಕರ್ತರು, ಶಾಸಕರನ್ನು ರಕ್ಷಿಸಲು ಪ್ರಕರಣಗಳನ್ನು ಅಭಿಯೋಜನೆ ಯಿಂದ ವಾಪಸ್ ಪಡೆದಿದೆ. ರೈತರು, ವಿದ್ಯಾರ್ಥಿಗಳು, ನೀರಿಗಾಗಿ, ವಿದ್ಯುತ್, ಸರ್ಕಾರದ ನಡೆ ಖಂಡಿಸಿ ನಡೆಸುವ ಹೋರಾಟಗಳಿಗೆ ಸೀಮಿತವಾಗಬೇಕಿದ್ದ ಕ್ರಿಮಿನಲ್ ಪ್ರಕರಣಗಳ ವಾಪಸ್ ಪಡೆಯುವ ಪ್ರಕ್ರಿಯೆ, ಪಕ್ಷದವರನ್ನು ಹಾಗೂ ಸಂಘಟನೆ ಕಾರ್ಯಕರ್ತರನ್ನು ರಕ್ಷಿಸುವ ಉದ್ದೇಶಕ್ಕಾಗಿ ವಾಪಸ್ ಪಡೆಯುತ್ತಿರುವುದು ಆತಂಕವನ್ನುಂಟು ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

SIR ಅಕ್ರಮ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ