ಬೆಂಗಳೂರು: ಒಂಟಿ ಮಹಿಳೆಯ ಮನೆಗೆ ನುಗ್ಗಿ ಆಕೆಯ ಕೈ ಕಾಲುಗಳನ್ನು ಕಟ್ಟಿ, ಬಾಯಿಗೆ ಪ್ಲಾಸ್ಟರ್ ಸುತ್ತಿ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದ ತಮಿಳುನಾಡು ಮೂಲದ ಮೂವರು ಆರೋಪಿಗಳನ್ನು ವೈಟ್‌ಫೀಲ್ಡ್ ವಿಭಾಗದ ಕೆ.ಆರ್.ಪುರಂ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 6.50 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ
ಯಶಸ್ವಿಯಾಗಿದ್ದಾರೆ.
ಕೆ.ಆರ್.ಪುರಂ ವಿ.ಬಿ.ಲೇಔಟ್ 1ನೇ ಕ್ರಾಸ್ ಗಂಗಮ್ಮ ದೇವಸ್ಥಾನ ಸ್ಟ್ರಿಟ್ ನಿವಾಸಿ ಶಿವಕುಮಾರ್ ಅಲಿಯಾಸ್ ಮನೋಜ್ (37), ಕೆ.ಆರ್‌ಪುರಂ ಆನಂದಪುರ ಸರ್ಕಲ್ ಹತ್ತಿರದ ಅತಿಥಿ ಬಡಾವಣೆ 3ನೇ ಕ್ರಾಸ್ ನಿವಾಸಿ ಸಿದ್ದಾರ್ಥ ಎಸ್ (25) ಹಾಗೂ ಕೆ.ಆರ್.ಪುರಂ ಅತಿಥಿ ಬಡಾವಣೆಯ 3ನೇ ಕ್ರಾಸ್ ನಿವಾಸಿ ಡೇವಿಡ್ ಅಲಿಯಾಸ್ ಬುದ್ಧ ನೇಷನ್ (32) ಬಂಧಿತ ಆರೋಪಿಗಳು.
ಶಿವಕುಮಾರ್ ಮೂಲತಃ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಎಂಜಿಆರ್ ನಗರದವನು.ಸಿದ್ದಾರ್ಥ ಮತ್ತು ಡೆವಿಡ್ ತ್ರಿಪತ್ತೂರು ಜಿಲ್ಲೆಯ ಯಾಲಗಿರಿ ಗ್ರಾಮದ ಜೋಲಾರಪೇಟೆಯವರಾಗಿದ್ದಾರೆ.
ಘಟನೆಯ ವಿವರ: ಇದೆ ವರ್ಷದ ಆಗಸ್ಟ್ 19ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಬೈಕ್‌ನಲ್ಲಿ ಕೋರಿಯರ್ ಡೆಲಿವರಿ ಮಾಡುವ ನೆಪದಲ್ಲಿ ಒಂಟಿಯಾಗಿ ವಾಸವಿದ್ದ ಮಹಿಳೆಯ ಮನೆಯ ಬಾಗಿಲನ್ನು ತೆರೆಸಿ, ಏಕಾಏಕಿ ಒಳಗೆ ನುಗ್ಗಿದ್ದರು. ಮನೆಯಲ್ಲಿದ್ದ ಮಹಿಳೆಗೆ ಡ್ರ್ಯಾಗರ್ ತೋರಿಸಿ, ಹೆದರಿಸಿ ಅವರ ಕೈ ಕಾಲುಗಳನ್ನು ಪ್ಲಾಸ್ಟರ್‌ನಿಂದ ಕಟ್ಟಿ ಬಾಯಿಗೆ
ಕರ್ಚೀಫ್ ತುರುಕಿ ಕಿರುಚದಂತೆ ಬಾಯಿಗೆ ಪ್ಲಾಸ್ಟರ್ ಸುತ್ತಿ ಮನೆಯಲ್ಲಿದ್ದ 1,60,000 ರೂ.ನಗದು, 170 ಗ್ರಾಂ ತೂಕದ ಚಿನ್ನಾಭರಣ, ಮಾಂಗಲ್ಯ ತಾಳಿ ಸಮೇತ ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.