ರಾಜ್ಯ

ಡ್ರಗ್ಸ್ ಜಾಲ: ಬೆಂಗಳೂರಿನಲ್ಲಿ ಮುಂದುವರೆದ ಸಿಸಿಬಿ ದಾಳಿ, 44 ಲಕ್ಷ ಮೌಲ್ಯದ ಡ್ರಗ್ಸ್ ಪತ್ತೆ, ಬೆಳಗಾವಿ, ಚಿತ್ರದುರ್ಗದಲ್ಲಿ ದಾಳಿ

Srinivasamurthy VN

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರ ದಾಳಿ ಮುಂದುವರೆದಿದ್ದು, ನಿನ್ನೆ ಮತ್ತೆ 44 ಲಕ್ಷ ಮೌಲ್ಯದ ಮಾದಕವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರಿನ ಕೆಆರ್ ಪುರಂನ ಮನೆಯೊಂದರಲ್ಲಿ ಮಾದಕವಸ್ತುಗಳಿರುವ ಕುರಿತು ಖಚಿತ ಮಾಹಿತಿ ಪಡೆದ ಅಧಿಕಾರಿಗಳು ಕೂಡಲೇ ದಾಳಿ ನಡೆಸಿದ್ದಾರೆ. ಈ ವೇಳೆ ಶೋಧ ನಡೆಸಿದ ಅಧಿಕಾರಿಗಳಿಗೆ ಬರೊಬ್ಬರಿ 44 ಲಕ್ಷ ಮೌಲ್ಯದ ಮಾದಕವಸ್ತುಗಳು ಪತ್ತೆಯಾಗಿದೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಅಧಿಕಾರಿಗಳು ಸುಬ್ರಮಣಿ (26), ವಿಧುಸ್ (31) ಮತ್ತು ಶೆಜಿನ್ (21) ಎಂಬುವವರನ್ನು ಬಂಧಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ ಬಂಧಿತ ಆರೋಪಿ ವಿಧುಸ್ ಬ್ರಿಟನ್ ನಲ್ಲಿ ಕಂಪ್ಯೂಟರ್ ಸೈನ್ಸ್ ವಿಚಾರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಸುಬ್ರಮಣಿ ಇಂದಿರಾನಗರದ ಖಾಸಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದ. ಅಂತೆಯೇ ಮತ್ತೋರ್ವ ಆರೋಪಿ ಶೆಜಿನ್ ಹೊಟೆಲ್ ಮ್ಯಾನೇಜ್ ಮೆಂಟ್ ನ ಅಂತಿಮ ವರ್ಷದ  ಪದವಿ ವಿದ್ಯಾರ್ಥಿ ಎಂದು ಹೇಳಲಾಗಿದೆ. 

ಬೆಳಗಾವಿ, ಚಿತ್ರದುರ್ಗದಲ್ಲೂ ದಾಳಿ
ಬೆಂಗಳೂರು ಮಾತ್ರವಲ್ಲದೇ ಅತ್ತ ಬೆಳಗಾವಿ, ಚಿತ್ರದುರ್ಗದಲ್ಲೂ ದಾಳಿಯಾಗಿದ್ದು, ಕಟಾವಿಗೆ ಸಿದ್ಧವಾಗಿದ್ದ ಸುಮಾರು 2 ಕೋಟಿ ರೂ ಮೌಲ್ಯದ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿತ್ರದುರ್ಗದ ರಾಂಪುರ ತಾಲ್ಲೂಕಿನ ಒಡೆಯರಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರಿಗೆ ತಿಳಿಯದಂತೆ ಗಾಂಜಾವನ್ನು  ಬೆಳೆಯಲಾಗಿತ್ತು. ಪ್ರಕರಣ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಇತ್ತ ಬೆಳಗಾವಿಯಲ್ಲೂ ಪೊಲೀಸ್ ದಾಳಿ ನಡೆದಿದ್ದು, ಈ ವೇಳೆ ಬರೊಬ್ಬರಿ 123.5 ಕೆಜಿ ಗಾಂಜಾವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಅಲ್ಲದೆ 7 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

SCROLL FOR NEXT