ರಾಜ್ಯ

ಭಾರೀ ಮಳೆಗೆ ಸಿಲಿಕಾನ್ ಸಿಟಿ ತತ್ತರ: ಹಲವೆಡೆ ಮನೆಗಳಿಗೆ ನುಗ್ಗಿದ ನೀರು, ಜನ ಜೀವನ ಅಸ್ತವ್ಯಸ್ಥ

Manjula VN

ಬೆಂಗಳೂರು: ಬೆಂಗಳೂರಿನಲ್ಲಿ ಮಂಗಳವಾರ ಮತ್ತು ಬುಧವಾರ ರಾತ್ರಿ ಅಬ್ಬರಿಸಿದ ಭಾರೀ ಮಳೆಗೆ ನಗರದ ಹಲವು ಬಡಾವಣೆಗಳು ತತ್ತರಿಸಿದ್ದು, ತಗ್ಗುಪ್ರದೇಶದ 350ಕ್ಕೂ ಹೆಚ್ಚು ಮನೆಗಳು ಹಾಗೂ ಹತ್ತಾರು ಅಪಾರ್ಟ್'ಮೆಂಟ್ ಗಳ ಸೆಲ್ಲಾರ್ ಗಳಿಗೆ ನೀರು ತುಂಬಿ ಅಲ್ಲಿನ ಜನ ಜೀವನ ಅಸ್ತವ್ಯಸ್ಥಗೊಂಡಿತ್ತು. ಇದರ ನಡುವೆಯೇ ಇನ್ನೂ ಎರಡು ದಿನಗಳ ಕಾಲ ನಗರದಲ್ಲಿ ಭಾರೀ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. 

ಮಳೆಯಿಂದ ವಿವಿಧ ರಸ್ತೆಗಳಲ್ಲಿ ಹತ್ತಾರು ಮರಗಳು ಧರೆಗುರುಳಿ ಸುತ್ತಮುತ್ತರ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡರೆ, ಪ್ರಮುಖ ಅಂಡರ್ ಪಾಸ್ ಗಳು ಜಲಾವೃತಗೊಂಡು ವಾಹನ ಸಂಚಾರಕ್ಕೆ ಮಂಗಳವಾರ ರಾತ್ರಿ ಇಡೀ ಅಡ್ಡಿಯುಂಟಾಗಿ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಈ ಮಧ್ಯೆ, ತುಮಕೂರು ರಸ್ತೆಯ ನೆಲಗದರಹಳ್ಳಿಯಲ್ಲಿ ಮನೆಗಳಿಗೆ ನೀರು ನುಗ್ಗಿದ್ದರಿಂದ ಆಕ್ರೋಶಗೊಂಡ ಸಂತ್ರಸ್ತರು ರಸ್ತೆಗೆ ಕಲ್ಲು, ಮರದ ದಿಮ್ಮಿಗಳನ್ನು ಇಟ್ಟು ಸ್ಥಳೀಯ ಶಾಸಕರು ಮತ್ತು ಕಾರ್ಪೊರೇಟರ್ ವಿರುದ್ಧ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು. 

ಭಾರೀ ಮಳೆಯಾದರೆ ರಾಜಕಾಲುವೆಯ ನೀರು ಮನೆಗಳಿಗೆ ನುಗ್ಗುತ್ತಿದ್ದು ಎಷ್ಟೇ ಮನವಿ ಮಾಡಿದರೂ ಬಿಬಿಎಂಪಿ ರಾಜಕಾಲುವೆ ಗೋಡೆ ಎತ್ತರಿಸಿದೆ ನಿರ್ಲಕ್ಷಿಸಿದೆ ಎಂದು ಕಿಡಿಕಾರಿದರು. 

ವಿದ್ಯಾರಣ್ಯಪುರದಲ್ಲಿರುವ ಸಿಂಗಾಪುರ ಕೆರೆ ತುಂಬಿದ ಹಿನ್ನಲೆಯಲ್ಲಿ ರಸ್ತೆಗಳು ಹಾಗೂ ಸ್ಥಳೀಯ ಮನೆಗಳಿಗೆ ನೀರು ನುಗ್ಗಿದ್ದು, ಕೆರೆಯಲ್ಲಿದ್ದ ಮೀನುಗಳು ರಸ್ತೆಯ ನೀರಿನಲ್ಲಿ ಕಂಡು ಬಂದಿತ್ತು. ಇದನ್ನು ಕಂಡ ಅಪಾರ್ಟ್'ಮೆಂಟ್ ಗಳ ಭದ್ರತಾ ಸಿಬ್ಬಂದಿಗಳು ಮೀನು ಹಿಡಿಯುತ್ತಿರುವ ದೃಶ್ಯಗಳು ಕಂಡು ಬಂದಿತ್ತು. 

ಎರಡು ದಿನಗಳ ಭಾರಿ ಮಳೆಯಲ್ಲಿ ಮಂಗಳವಾರ ಇಡೀ ರಾತ್ರಿ ಸುರಿದ ಮಳೆಯಿಂದಾದಿ ಅನಾಹುತವೇ ಹೆಚ್ಚು ಸೃಷ್ಟಿಯಾಗಿತ್ತು. ಅಂದು ನಗರದಲ್ಲಿ ಸರಾಸರಿ 57 ಮಿ.ಮೀ ಮಳೆಯಾಗಿದೆ. ಕುಶಾಲನಗರ ಮತ್ತು ಮನೋರಾಯನಪಾಳ್ಯದಲ್ಲಿ ಅತೀ ಹೆಚ್ಚು 136 ಮಿ.ಮೀ ಮಳೆಯಾರಿದೆ. ಇದರ ಪರಿಣಾಮ ಮಾರುತಿನಗರ, ಹೊರಮಾವು, ಹೆಣ್ಣೂರು, ಆರ್'ಟಿ ನಗರ, ಮರಿಯಪ್ಪನಪಾಳ್ಯ, ಕೆಂಪಾಪುರ, ನಾಗಸಂದ್ರ, ಹೆಚ್'ಬಿಆರ್ ಲೇಔಟ್, ಬಸವನಪುರ ಹಾಗೂ ಡಾಲರ್ಸ್ ಕಾಲೋನಿ ಸೇರಿದಂತೆ ಪೂರ್ವ ಹಾಗೂ ಪಶ್ಚಿಮ ವಲಯದ ತಗ್ಗು ಪ್ರದೇಶಗಳ ಬಡವಾಣೆಗಳು ಅಕ್ಷರಶಃ ದ್ವೀಪಗಳಾಗಿದ್ದವು. ಇಲ್ಲಿನ 300ಕ್ಕೂ ಹೆಚ್ಚು ಮನೆ, ಅಂಗಡಿಗಳಿಗೆ ನೀರು ನುಗ್ಗಿ ಅಲ್ಲಿನ ಎಲ್ಲಾ ವಸ್ತೂಗಳು ನೀರು ಪಾಲಾಗಿ ನಷ್ಟ ಅನುಭವಿಸಿದ್ದಾರೆ. 

SCROLL FOR NEXT