ರಾಜ್ಯ

ತ್ಯಾಜ್ಯ ನೀರು ಸಂಸ್ಕರಣೆಯಿಂದ ಜಲ ಮೂಲಗಳ ಸಂರಕ್ಷಣೆ ಸಾಧ್ಯ: ಸಿಎಂ ಯಡಿಯೂರಪ್ಪ

Lingaraj Badiger

ಬೆಂಗಳೂರು: ತ್ಯಾಜ್ಯ ನೀರು ಕೆರೆ-ಕಟ್ಟೆಗಳಿಗೆ ಸೇರಿ ಮಾಲಿನ್ಯವಾಗುವುದನ್ನು ತಡೆಗಟ್ಟಬೇಕಾಗಿದ್ದು, ಜಲಮರುಪೂರಣ, ಜಲಮರುಬಳಕೆಗೆ ಅದ್ಯತೆ ನೀಡಬೇಕಾಗಿದೆ. ಇಂತಹ ಕ್ರಮದಿಂದ ಜಲ ಮೂಲಗಳ ಸಂರಕ್ಷಣೆ ಸಾಧ್ಯವಾಗಲಿದ್ದು, ಪ್ರಕೃತಿಯ ಸಂರಕ್ಷಣೆ ಮಾಡಲು ಸಹಕಾರಿಯಾಗುವ ಮಹತ್ವದ ಉದ್ದೇಶದಿಂದ ಮಧ್ಯಂತರ ತ್ಯಾಜ್ಯ ನೀರು ರೇಚಕ ಸ್ಥಾವರ ಸ್ಥಾಪಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ರಾಷ್ಟ್ರೀಯ ಕ್ರೀಡಾ ಗ್ರಾಮ, ಕೋರಮಂಗಲದಲ್ಲಿ ಹೊಸದಾಗಿ ನಿರ್ಮಿಸಿರುವ 210 ದ.ಲ.ಲೀ ಸಾಮರ್ಥ್ಯದ ಮಧ್ಯಂತರ ತ್ಯಾಜ್ಯ ನೀರು ರೇಚಕ ಸ್ಥಾವರ ಉದ್ಘಾಟಿಸಿ ಮಾತನಾಡಿದ ಅವರು, ಈ ವ್ಯಾಪ್ತಿಯಲ್ಲಿ ಬರುವಂತಹ ಕೆರೆಗಳು ಇನ್ನಷ್ಟು ಮಲಿನಗೊಳ್ಳುವುದನ್ನು ತಪ್ಪಿಸಲು ಸಹಕಾರಿಯಾಗಿವೆ ಎಂದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯವರು ಕೆ-100 ಯೋಜನೆಯಡಿ ಮೆಜೆಸ್ಟಿಕ್‍ನಿಂದ ರಾಷ್ಟ್ರೀಯ ಕ್ರೀಡಾಗ್ರಾಮ ಕೋರಮಂಗಲದವರೆಗೂ ಇರುವ ಮಳೆನೀರು ಕಾಲುವೆಯ ಪುನರುಜ್ಜೀವನಗೊಳಿಸುವ ಮಹತ್ತರ ಯೋಜನೆಯನ್ನು ತೆಗೆದುಕೊಂಡಿರುವುದರಿಂದ ಈ ಭಾಗದ ಮಳೆನೀರು ಕಾಲುವೆಯನ್ನು ತ್ಯಾಜ್ಯ ನೀರು ಸೇರ್ಪಡೆಯಿಂದ ಸಂಪೂರ್ಣವಾಗಿ ಮುಕ್ತಗೊಳಿಸಲು ಸಹಕಾರಿಯಾಗಲಿದೆ ಎಂದರು.

ಈ ನಿಟ್ಟಿನಲ್ಲಿ ಸರ್ಕಾರದ ಅನುದಾನಿತ ಅಮೃತ್ ಯೋಜನೆಯಡಿಯಲ್ಲಿ ಸುಮಾರು 38.61 ಕೋಟಿ ವೆಚ್ಚದಲ್ಲಿ ಸದರಿ ಸ್ಥಾವರನ್ನು ಸ್ಥಾಪಿಸಲಾಗಿದೆ. ಕೋರಮಂಗಲ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಶುದ್ಧೀಕರಿಸುವುದು ಅವಶ್ಯಕವಾಗಿದ್ದು, ಶುದ್ಧೀಕರಿಸಿದ ತ್ಯಾಜ್ಯ ನೀರನ್ನು ಬೆಂಗಳೂರಿನ ಹೊರಭಾಗದಲ್ಲಿರುವ ಆನೇಕಲ್, ಹೊಸಕೋಟೆ ಗ್ರಾಮಗಳಲ್ಲಿರುವ ಕೆರೆಗಳನ್ನು ಪುನರುಜ್ಜೀವನಗೊಳಿಸಲು ಉಪಯೋಗಿಸಬಹುದಾಗಿದೆ. ಇದರಿಂದಾಗಿ ಕೃಷಿ ಚಟುವಟಿಕೆ ಜತೆಗೆ ಅಂತರ್ಜಲಮಟ್ಟ ಹೆಚ್ಚಾಗಲಿದೆ ಎಂದು ಸಿಎಂ ತಿಳಿಸಿದರು.

SCROLL FOR NEXT