ರಾಜ್ಯ

ಸೈಬರ್ ಕ್ರೈಂ ತಡೆಗೆ ಪಣತೊಟ್ಟ ರಾಜ್ಯ ಸರ್ಕಾರ, ಆನ್'ಲೈನ್ ವಂಚನೆಗೆ ಕಡಿವಾಣ ಹಾಕಲು ಏಕಗವಾಕ್ಷಿ ವ್ಯವಸ್ಥೆ ಜಾರಿ!

Manjula VN

ಬೆಂಗಳೂರು: ಡ್ರಗ್ಸ್ ದಂಧೆ ತಡೆಗಟ್ಟಲು ಸಮರೋಪಾದಿಯಲ್ಲಿ ಕಾರ್ಯಾಚರಣೆ ಆರಂಭಿಸಿರುವ ರಾಜ್ಯ ಸರ್ಕಾರ ಇದೀಗ ಹೆಚ್ಚುತ್ತಿರುವ ಸೈಬರ್ ಕ್ರೈಂ ತಡೆಗೆ ಪಣತೊಟ್ಟಿದೆ. ಆನ್'ಲೈನ್ ಆರ್ಥಿಕ ವಂಚನೆ ತಡೆಯಲು ಹಾಗೂ ವಂಚಕರನ್ನು ಶೀಘ್ರಗತಿಯಲ್ಲಿ ಪತ್ತೆಹಚ್ಚಲು ದೇಶದಲ್ಲೇ ಮೊದಲ ಬಾರಿಗೆ ಏಕಗವಾಕ್ಷಿ ವ್ಯವ್ಯಸ್ಥೆ ಹಾಗೂ ಬ್ಯಾಂಕ್ ಗಳ ನಡುವೆ ಸಮನ್ವಯಕ್ಕಾಗಿ ತಾಂತ್ರಿಕ ಸಮನ್ವಯ ಸಮಿತಿ ರಚನೆ ಮಾಡಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೈಬರ್ ಕ್ರೈಂ ಹಾಗೂ ಡಿಜಿಟಲ್ ವಂಚನೆಗಳಿಂದ ಸಾರ್ವಜನಿಕರ ಹಣಕ್ಕೆ ಭದ್ರತೆ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ತಮ್ಮ ಅಕೌಂಟ್ ನಿಂದ ಹಣ ಕಳೆದುಕೊಂಡವರು ಒಂದು ವಾಟ್ಸಾಪ್ ಸಂದೇಶ ಕಳುಹಿಸಿ ದೂರು ನೀಡಬಹುದು. ದೂರು ಸ್ವೀಕರಿಸಿದ 2 ನಿಮಿಷದಲ್ಲೇ ತನಿಖೆ ಶುರು ಮಾಡಲಾಗುವುದು ಎಂದು ತಿಳಿಸಿದ್ದಾರೆ. 

ಡಿಜಿಟಲ್ ಬ್ಯಾಕಿಂಗ್ ವಂಚನೆ, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನಕಲಿ ಕಸ್ಟಮರ್ ಕೇರ್ ಕರೆಗಳ ಹೆಸರಿನಲ್ಲಿ ಸಾರ್ವಜನಿಕರ ಹಣಕ್ಕೆ ಕನ್ನ ಹಾಕಲಾಗುತ್ತಿದೆ. ಎಪಿಎಂಸಿಯಿಂದಲೂ ಖದೀಮರು ರೂ.47 ಕೋಟಿ ಹ್ಯಾಕ್ ಮಾಡಿದ್ದು, ಸರ್ಕಾರಿ ಹಣಕ್ಕೇ ರಕ್ಷಣೆ ಇಲ್ಲದಂತಾಗಿದೆ. ಹೀಗಾಗಿ ಸಾರ್ವಜನಿಕರ ಹಣಕ್ಕೆ ಸುರಕ್ಷತೆ ಒದಗಿಸಲು ಸೈಬರ್ ಕ್ರೈಂ ನಿಯಂತ್ರಣಕ್ಕಾಗಿ ಏಕಗವಾಕ್ಷಿ ವ್ಯವಸ್ಥೆ ಮಾಡಲಾಗುತ್ತಿದೆ. 

ಆರ್'ಬಿಐ ಅಧಿಕಾರಿಗಳು, ಬ್ಯಾಂಕ್ ತಜ್ಞರು, ಐಟಿ ತಜ್ಞರು ಹಾಗೂ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ಏಕಗವಾಕ್ಷಿ ವ್ಯವಸ್ಥೆಗೆ ವಾಟ್ಸಾಪ್ ಸಂದೇಶದ ಮೂಲಕ ದೂರು ದಾಖಲಿಸಬಹುದು. ಇದಕ್ಕಾಗಿ ಸದ್ಯದಲ್ಲೇ ಒಂದು ವಾಟ್ಸಾಪ್ ಸಂಖ್ಯೆಯನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ. 

SCROLL FOR NEXT