ರಾಜ್ಯ

ಕೆಂಪೇಗೌಡರ ಪರಿಕಲ್ಪನೆಯಲ್ಲೇ ಸರ್ಕಾರ ಕೆಲಸ ಮಾಡಲಿದೆ: ಡಿಸಿಎಂ ಅಶ್ವತ್ಥ ನಾರಾಯಣ್

Manjula VN

ಬೆಂಗಳೂರು: ಕೆಂಪೇಗೌಡ ಪರಿಕಲ್ಪನೆಯಲ್ಲೇ ಸರ್ಕಾರ ಕೆಲಸ ಮಾಡುತ್ತಿದ್ದು, ನಗರವನ್ನು ಮುಂದಿನ ದಿನದಲ್ಲಿ ವಿಶ್ವದ ಮತ್ತು ಭಾರತ ನಂಬರ್ 1 ನಗರವಾಗಿ ಮಾಡುತ್ತೇವೆಂದು ಉಪಮುಖ್ಯಮಂತ್ರಿ ಡಾ.ಸಿಎನ್. ಅಶ್ವತ್ಥ್ ನಾರಾಯಣ ಅವರು ಹೇಳಿದ್ದಾರೆ. 

ಬಿಬಿಎಂಪಿ ವತಿಯಿಂದ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ವರ್ಷ ಕೋವಿಡ್‌ ಹಿನ್ನೆಲೆಯಲ್ಲಿ ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಸರಳವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಗಿದ್ದು, 32 ಮಂದಿ ಕೊರೋನ ವಾರಿಯರ್ಗಳಿಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪುರಸ್ಕೃತರ ಆಯ್ಕೆ ಬಗ್ಗೆ ಅಪಸ್ವರ ಸರಿಯಲ್ಲ ಎಂದು ಹೇಳಿದ್ದಾರೆ. 

ಈ ಮೊದಲೇ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಕೊರೋನ ವಾರಿಯರುಗಳಿಗೇ ಕೇಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಹೇಳಲಾಗಿತ್ತು. ಆದರಂತೆ ಸಾಧಕರನ್ನು ಗುರುತಿಸಿ ಗೌರವಿಸಲಾಗಿದೆ. ಅವರನ್ನು ಗುರುತಿಸಿ ಗೌರವಿಸಬೇಕಾದ್ದು ಎಲ್ಲರ ಕರ್ತವ್ಯ ಎಂದರು.

ಕೆಂಪೇಗೌಡರ ಪರಿಕಲ್ಪನೆಯಲ್ಲೇ ಬಿಬಿಎಂಪಿ ಇದೀಗ ಕೆಲಸ ಮಾಡುತ್ತಿದೆ, ನಗರವನ್ನು ಮುಂದಿನ ದಿನಗಳಲ್ಲಿ ವಿಶ್ವದ ಮತ್ತು ಭಾರತದ ನಂಬರ್ 1 ನಗರವಾಗಿ ಮಾಡುತ್ತೇವೆ. ಜಾತಿ ನೋಡದೆ ಎಲ್ಲರನ್ನು ಸಮಾನವಾಗಿ ಕಂಡು ವೃತ್ತಿಗೆ ಅನುಗುಣವಾಗಿ ಪೇಟೆಗಳನ್ನು ನಿರ್ಮಿಸಿದ ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಬೆಂಗಳೂರಿನ ಪೇಟೆಗಳಲ್ಲೂ ಪ್ರತಿಷ್ಟಾಪಿಸಲಾಗುತ್ತೆದ ಎಂದು ಹೇಳಿದ್ದಾರೆ. 

ಬಿಬಿಎಂಪಿ, ಪ್ರವಾಸೋದ್ಯಮ ಇಲಾಖೆ ಹಾಗೂ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಸೇರಿ ನಗರದಲ್ಲಿನ ಇತಿಹಾಸ ಪ್ರಸಿದ್ಧ ಸ್ಥಳಗಳನ್ನು ಅಭಿವೃದ್ಧಿಪಡಿಸಲಾಗುವುದು. ನಗರ ಹಾಗೂ ಸುತ್ತಮುತ್ತಲಿನ ಬೆಂಗಳೂರು ಕೋಟೆ, ಹುಲಿದುರ್ಗ ಕೋಟೆ, ರಾಮದುರ್ಗ ಕೋಟೆ, ಮಾಗಡಿ ಕೋಟೆ, ಸಾವಂತ ದುರ್ಗಕೋಟೆ ಹಾಗೂ ಶಿವಗಂಗೆ ಅಭಿವೃದ್ಧಿ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. 

SCROLL FOR NEXT