ರಾಜ್ಯ

ಮನೆಯಲ್ಲೇ ಚಿಕಿತ್ಸೆ ಪಡೆದು ಕೊರೋನಾ ಗೆದ್ದ 105 ವರ್ಷದ ವೃದ್ಧೆ!

Manjula VN

ಕೊಪ್ಪಳ; ಕೊರೋನಾ ಹಾಟ್'ಸ್ಪಾಟ್ ಎಂದೇ ಹೇಳಲಾಗುತ್ತಿರುವ ಕೊಪ್ಪಳ ಜಿಲ್ಲೆಯಲ್ಲಿ ನಿತ್ಯವೂ ಸಾಲು ಸಾಲು ಸಾವುಗಳು ಸಾಮಾನ್ಯ ಎನ್ನುವಂತಾಗಿದೆ. ಇದರ ಮಧ್ಯೆಯೂ ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮದ 105 ವರ್ಷದ ಕಮಲಮ್ಮ ಲಿಂಗನಗೌಡ ಹಿರೇಗೌಡ್ರ ಅವರು, ಸೋಂಕು ತಗುಲಿದ್ದರೂ ಮನೆಯಲ್ಲಿಯೇ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. 

ಕಳೆದವಾರವಷ್ಟೇ ಕಮಲಮ್ಮ ಅವರಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಕೊಪ್ಪಳದ ಅವರ ಪುತ್ರ ಶಂಕರಗೌಡ ಅವರ ನಿವಾಸದಲ್ಲಿ ಹೋಮ್ ಐಸೋಲೇಷನ್ ನಲ್ಲಿಟ್ಟು, ಚಿಕಿತ್ಸೆ ನೀಡಲಾಗುತ್ತಿತ್ತು. 

ಜ್ವರ ಸೇರಿದಂತೆ ಮೊದಲಾದ ತೊಂದರೆಯನ್ನು ಅನುಭವಿಸುತ್ತಿದ್ದ ಅವರ ಕೋವಿಡ್ ಚೆಕ್ ಮಾಡಿದ ವೇಳೆಯಲ್ಲಿ ಪಾಸಿಟಿವ್ ಬಂದಿತ್ತು. ಉಳಿದಂತೆ ಯಾವುದೇ ಸಮಸ್ಯೆಗಳಿರಲಿಲ್ಲ. ಹೀಗಾಗಿ ಮನೆಯಲ್ಲಿಯೇ ಹೋಂ ಐಸೋಲೇಷನ್ ನಲ್ಲಿಡಲಾಗಿತ್ತು. 

ವಾರದ ಚಿಕಿತ್ಸೆ ಬಳಿಕ ಈಗ ಸಂಪೂರ್ಣ ಗುಣಮುಖವಾಗಿ ಮತ್ತೊಮ್ಮೆ ಪರೀಕ್ಷೆ ನಡೆಸಿದಾಗ ನೆಗೆಟಿವ್ ಬಂದಿದೆ ಎನ್ನುತ್ತಾರೆ ಚಿಕಿತ್ಸೆ ನೀಡಿದ ಮೊಮ್ಮಗ ಡಾ.ಶ್ರೀನಿವಾಸ ಹ್ಯಾಟಿ. ಇತರೆ ಕಾಲಿಗೆಳು ಇರದೆ ಇರುವುದರಿಂದ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗಿತ್ತು. ಅಲ್ಲದೆ ಕಮಲಮ್ಮ ಆಸ್ಪತ್ರೆಗೆ ಹೋಗುವುದಕ್ಕೆ ಹಿಂದೇಟು ಹಾಕಿದ್ದರಿಂದ ಮನೆಯಲ್ಲಿಯೇ ಚಿಕಿತ್ಸೆ ನೀಡಿದ್ದಾರೆ. 

ಈ ನಡುವೆ ಆಹಾರ ತ್ಯಜಿಸಿದ್ದ ಕಮ್ಮಲಮ್ಮ ಅವರು, ನಾನು ಇಷ್ಟು ವರ್ಷಗಳ ಕಾಲ ಬದುಕಿದ್ದು ಸಾಕು. ನನಗೇನು ಕೊಡಬೇಡಿ. ನಾನೇ ಜೀವ ತ್ಯಜಿಸುತ್ತೇನೆ ಎಂದು ವಾರಗಳ ಕಾಲ ಯಾವುದೇ ಆಹಾರವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಆದರೂ, ಒತ್ತಾಯ ಮಾಡಿ ಗಂಜಿ ಮತ್ತು ನೀರನ್ನು ನೀಡಲಾಗಿತ್ತಿದೆ. ಔಷಧಿಯನ್ನೂ ನಿಯಂತ್ರಿತವಾಗಿ ನೀಡಲಾಗಿದೆ. ಉಳಿದಂತೆ ಅವರಿಗೆ ಯಾವುದೇ ಸಮಸ್ಯೆ ಇಲ್ಲದೆ ಇರುವುದರಿಂದ ಬಹುಬೇಗ ಚೇತರಿಸಿಕೊಂಡಿದ್ದಾರೆ. 

ನನ್ನ ವೃತ್ತಿ ಬದುಕಿನಲ್ಲಿಯೇ ಇದು ಸವಾಲಿನ ಪರಿಸ್ಥಿತಿ ಎನ್ನುವಂತೆ ಆಗಿತ್ತು. ಆದರೂ ಯಾವುದೇ ಇತರೆ ಕಾಲಿಯೆಗಳು ಇರದೆ ಇರುವುದರಿಂದ ಸಾಮಾನ್ಯ ಚಿಕಿತ್ಸೆ ನೀಡಲಾಗಿದೆ. ಈಗ ಅವರ ಕೋವಿಡ್ ವರದಿ ನೆಗೆಟಿವ್ ಬಂದಿದೆ.ನಿಜಕ್ಕೂ ಕೊರೋನಾಗೆ ಅಂಜುವವರು ಅಜ್ಜಿಯ ಈ ಆತ್ಮಸ್ಥೈರ್ಯದಿಂದ ಕಲಿಯಬೇಕಾಗಿದೆ. ಸಾವಿಗೆ ಅಂಜದೆ, ಸಾವು ಅಪ್ಪಿಕೊಳ್ಳಲು ಮುಂದಾಗಿದ್ದರಿಂದ, ಭಯವೇ ಇಲ್ಲದಿರುವುದರಿಂದ ಗುಣಮುಖವಾಗಲು ಸಾಧ್ಯವಾಯಿತು ಎಂದು ಶ್ರೀನಿವಾಸ್ ಅವರು ತಿಳಿಸಿದ್ದಾರೆ. 

SCROLL FOR NEXT