ಬೆಳಗಾವಿ: ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸರ್ಕಾರ ತಮ್ಮ ವೈಫಲ್ಯಗಳನ್ನ ಮುಚ್ಚಿ ಕೊಳ್ಳಲು ಡ್ರಗ್ಸ್ ಮಾಫಿಯಾವನ್ನ ದೊಡ್ಡ ಮಟ್ಟದಲ್ಲಿ ಚರ್ಚೆಗೆ ತರಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಸ್ಥಳೀಯ ಕೆ.ಹೆಚ್.ಐ ದಲ್ಲಿನ ಸೇವಾದಳ ಕೇಂದ್ರ ಸ್ಥಾನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಷ್ಟ್ರಮಟ್ಟದಲ್ಲಿ ಮೋದಿ ಸರ್ಕಾರ ಹಾಗೂ ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರದ ವೈಫಲ್ಯ, ಒಳಜಗಳ ಮುಚ್ಚಿಹಾಕಲು ಈ ಎರಡೂ ಪ್ರಕರಣಗಳ ಮೂಲಕ ಇಡೀ ದೇಶವನ್ನೇ ಮಗ್ನವಾಗಿಸುವ ಯತ್ನ ಮೋದಿ, ಬಿಎಸ್'ವೈ ಸರ್ಕಾರ ಮಾಡುತ್ತಿವೆ. ಮುಂಬೈನಲ್ಲಿ ನಡೆದದ್ದು ಆತ್ಯಹತ್ಯೆಯೋ? ಕೊಲೆಯೋ? ಎಂಬುದನ್ನು ದೊಡ್ಡ ವಿಚಾರ ಮಾಡಿ ಓಡಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.
ಕೋವಿಡ್-19 ವಿಚಾರದಲ್ಲೂ ಸಾಕಷ್ಟು ಅವ್ಯವಹಾರ ನಡೆದಿದೆ. ಇದನ್ನು ಮುಚ್ಚಿಹಾಕಲು ಡ್ರಗ್ಸ್ ಪ್ರಕರಣ, ಡಿಜೆ ಹಳ್ಳಿ, ಕೆಜಿ ಹಳ್ಳಿ, ಅಲ್ಪಸಂಖ್ಯಾತರು ಅಂತಾ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಬಿಜೆಪಿಯ ದೊಡ್ಡ ದೊಡ್ಡ ನಾಯಕರೇ ಅಫೀಮು ಸೇವನೆ ಮಾಡುತ್ತಾರೆ. ಅದರ ಬಗ್ಗೆ ಯಾರೂ ಮಾತನಾಡಲ್ಲ ಎಂದು ಆರೋಪಿಸಿದರು.
ಇದೇ ವೇಳೆ ಶಾಸಕ ಜಮೀರ್ ಅಹ್ಮದ್ ಅವರೂ ಕೂಡ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅಕ್ರ ಚಟುವಟಿಕೆಗಳಲ್ಲಿ ಅಲ್ಪಸಂಖ್ಯಾತರನ್ನು ಗುರಿ ಮಾಡುವುದು ಬಿಜೆಪಿಯವರಿಗೆ ಫ್ಯಾಷನ್ ಆಗಿ ಹೋಗಿದೆ. ಕಲಬುರಗಿಯಲ್ಲಿ ಒಂದು ಸಾವಿರ ಕೆಜಿ ಗಾಂಜಾ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತನಾಗಿರುವ ವ್ಯಕ್ತಿ ಯಾವ ಪಕ್ಷಕ್ಕೆ ಸೇರಿದವನು? ಅವನು ಯಾವ ಸಮುದಾಯದಿಂದ ಬಂದವನು? ಜನರು ಈತವ ಬಗ್ಗೆ ಏಕೆ ಮಾತನಾಡುತ್ತಿಲ್ಲ? "ಎಂದು ಪ್ರಶ್ನಿಸಿದ್ದಾರೆ.