ರಾಜ್ಯ

ಗಾಂಜಾ ಮಾರಾಟ, ಸೇವನೆ: 38 ಜನರ ಬಂಧನ, 17.89 ಕೆ.ಜಿ. ಗಾಂಜಾ ವಶ

Lingaraj Badiger

ಬೆಂಗಳೂರು: ಗಾಂಜಾ ಸೇವನೆ, ಮಾರಾಟ ಮಾಡುತ್ತಿದ್ದ 38 ಜನರನ್ನು ಬಂಧಿಸಿ, 17.89 ಕೆ.ಜಿ. ಗಾಂಜಾ ಮತ್ತು 600 ಎಂ.ಎಲ್. ಗಾಂಜಾ ಆಯಿಲ್ ಅನ್ನು ಉತ್ತರ ವಿಭಾಗದ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಉತ್ತರ ವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದವರ ವಿರುದ್ಧ 3 ಪೊಲೀಸ್ ಠಾಣೆಗಳಲ್ಲಿ 4 ಪ್ರಕರಣಗಳನ್ನು ದಾಖಲು ಮಾಡಿ, 5 ಜನರನ್ನು ಬಂಧಿಸಿ 17.89 ಕೆ.ಜಿ ಮಾದಕ ವಸ್ತು ಗಾಂಜಾ ಹಾಗೂ 600 ಎಂ.ಎಲ್. ಗಾಂಜಾ ಆಯಿಲ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರ್ ಎಂ ಸಿ ಯಾರ್ಡ್ ಪೊಲೀಸರು ಅರುಣ್(29), ವಿಜಯನ್ (27), ದೀಪನ್ ಎಂಬುವವರನ್ನು ಬಂಧಿಸಿ, 13.8 ಕೆಜಿ ಗಾಂಜಾ ವಶಪಡಿಸಿಕೊಂಡು ಎರಡು ಪ್ರಕರಣ ದಾಖಲಿಸಿಕೊಂಡಿದ್ದಾರೆ‌‌.

ಅಚ್ಚುತನಗರದ 5ನೇ ಕ್ರಾಸ್ ರಸ್ತೆ ಪಕ್ಕದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ ವಿನಯ್‍ಕುಮಾರ್(22) ಎಂಬಾತನನ್ನುಬಂಧಿಸಿ 4 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.  ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಆಂಧ್ರಪ್ರದೇಶ ಮತ್ತು ಒರಿಸ್ಸಾ ರಾಜ್ಯಗಳ ನಡುವೆ ಬರುವ ಅಕೂರ್ ವ್ಯಾಲಿಯಲ್ಲಿ ವ್ಯಕ್ತಿಯೊಬ್ಬರಿಂದ ತಂದಿರುವುದಾಗಿ ಹಾಗೂ ಅದನ್ನು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡಿದರೆ ಹೆಚ್ಚಿನ ಹಣ ಗಳಿಸಬಹುದು ಎಂದು ಹೇಳಿದ್ದಾರೆ.

ಸೆಂಟ್ ಕ್ಲಾರೆಟ್ ಕಾಲೇಜು ಬಳಿ ಗಾಂಜಾ ಆಯಿಲ್‍ನ್ನು ತಂದು ಮಾರಾಟ ಮಾಡುತ್ತಿದ್ದ ತವನೀಶ್ ಎಂಬಾತನನ್ನು ಬಂಧಿಸಿ 600 ಎಂಎಲ್ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಉತ್ತರ ವಿಭಾಗದ ಪೊಲೀಸ್ ಠಾಣೆ ಸರಹದ್ದಿನಲ್ಲಿ ಗಾಂಜಾ ಮತ್ತು ಇನ್ನಿತರ ಮಾದಕ ಸೇವನೆ ಮಾಡುತ್ತಿದ್ದ ವ್ಯಕ್ತಿಗಳ ವಿರುದ್ದ 12 ಪೊಲೀಸ್ ಠಾಣೆಗಳಲ್ಲಿ 30 ಪ್ರಕರಣಗಳನ್ನು ದಾಖಲು ಮಾಡಿಕೊಂಡು 38 ಮಂದಿಯನ್ನು ಬಂಧಿಸಲಾಗಿದೆ.

SCROLL FOR NEXT