ರಾಜ್ಯ

ಡ್ರಗ್ಸ್ ಪ್ರಕರಣ ತನಿಖೆಯಲ್ಲಿ ಹಸ್ತಕ್ಷೇಪ ಮಾಡಲ್ಲ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

Lingaraj Badiger

ಬೆಂಗಳೂರು: ಡ್ರಗ್ಸ್ ಪ್ರಕರಣ ಸಂಬಂಧ ಸಿಸಿಬಿ ಪೊಲೀಸ್ ಅಧಿಕಾರಿಗಳ ತನಿಖೆಯಲ್ಲಿ ನಾವು ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ. ಪೊಲೀಸರಿಗೆ ಯಾರ ಮೇಲೆ ಅನುಮಾನ ಇದೆಯೋ ಅವರನ್ನು ಕರೆಸಿ ವಿಚಾರಣೆ ನಡೆಸಲಿ. ತಪ್ಪೇನಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಶುಕ್ರವಾರ ಹೇಳಿದ್ದಾರೆ.

ಇಂದು ಸದಾಶಿವನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಪೊಲೀಸರು ಏಕಾಏಕಿ ಯಾರಿಗೂ ವಿಚಾರಣೆಗೆ ಬರುವಂತೆ ನೋಟೀಸ್ ನೀಡಲ್ಲ. ಅವರಿಗೆ ಸಿಕ್ಕ ಮಾಹಿತಿ ಆಧಾರದ ಮೇಲೆ ಅವರು ವಿಚಾರಣೆ ನಡೆಸಲು ನಿರ್ಧರಿಸಿರುತ್ತಾರೆ ಎಂದರು.

ಪೊಲೀಸರು ತಮಗೆ ಬೇಕಾದ ಮಾಹಿತಿಯನ್ನು ಅವರಿಂದ ಪಡೆಯಲಿ. ಯಾರು ತಪ್ಪು ಮಾಡಿರುತ್ತಾರೋ ಅವರ ಮೇಲೆ ಕ್ರಮ ಕೈಗೊಳ್ಳುತ್ತಾರೆ. ಆದರೆ ನನ್ನ ಪ್ರಕಾರ ಯಾರದ್ದೋ ರಾಜಕಾರಣದ ಒತ್ತಡದ ಮೇಲೆ ಒಬ್ಬರನ್ನು ಕರೆದು ಅವರನ್ನು ಸಿಲುಕಿಸುವ ಕೆಲಸ ಮಾಡಬಾರದು ಎಂದು ಸಲಹೆ ನೀಡಿದರು.

ಡ್ರಗ್ಸ್ ಪ್ರಕರಣದಲ್ಲಿ ಜಮೀರ್ ಅಹಮದ್ ಅವರ ಹೆಸರು ಕೇಳಿಬಂದಿಲ್ಲ. ಬೀದಿಯಲ್ಲಿ ಹೋಗುವವರು ನೂರೈವತ್ತು ಮಾತನಾಡುತ್ತಾರೆ. ಜಮೀರ್ ವೈಯಕ್ತಿಕ ಜೀವನದಲ್ಲಿ ಕೊಲಂಬೋಗಾದರೂ ಹೋಗಲಿ, ಅಮೆರಿಕಾಕ್ಕಾದರೂ ಹೋಗಲಿ, ಲಾಸ್ ವೇಗಸ್ ಗಾದರೂ ಹೋಗಲಿ. ಅವರ ದುಡ್ಡಲ್ಲಿ ಅವರು ಹೋಗುತ್ತಾರೆ. ರಸ್ತೆಯಲ್ಲಿ ಮಾತಾಡಿದವರ ಮಾತಿಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಜಮೀರ್ ಒಬ್ಬ ಜವಾಬ್ದಾರಿಯುತ ಶಾಸಕ, ಈ ವಿಚಾರ ಹೇಗೆ ನಿಭಾಯಿಸಬೇಕು ಅಂತಾ ಅವರಿಗೆ ಗೊತ್ತಿದೆ ಎಂದರು.

SCROLL FOR NEXT