ರಾಜ್ಯ

ಬೆಂಗಳೂರಿನಲ್ಲಿ 250 ವಾರ್ಡ್ ಗಳ ರಚನೆ, ವಿಧಾನಸಭೆ ಅಧಿವೇಶನದಲ್ಲಿ ನಿರ್ಣಯ ಮಂಡನೆ

Srinivasamurthy VN

ಬೆಂಗಳೂರು: ಬೆಂಗಳೂರಿನಲ್ಲಿ ವಾರ್ಡ್ ಗಳ ಸಂಖ್ಯೆಯನ್ನು 250ಕ್ಕೆ ಹೆಚ್ಚಳ ಮಾಡುವ ಬಿಬಿಎಂಪಿ ನಿರ್ಣಯವನ್ನು ವಿಧಾನಸಭೆ ಅಧಿವೇಶನದ ಮುಂದಿಡಲಾಗುತ್ತದೆ.

ಹೌದು.. 'ಬಿಬಿಎಂಪಿ ವಿಧೇಯಕ-2020' ಪರಾಮರ್ಶೆಗಾಗಿ ಸಿವಿ ರಾಮನ್ ನಗರ ಕ್ಷೇತ್ರದ ಶಾಸಕ ಎಸ್‌.ರಘು ಅಧ್ಯಕ್ಷತೆಯಲ್ಲಿ ರಚಿಸಿರುವ ವಿಧಾನಮಂಡಲ ಜಂಟಿ ಸಲಹಾ ಸಮಿತಿ ಸದಸ್ಯರ ಶಿಫಾರಸ್ಸಿನಂತೆ ಪಾಲಿಕೆಯ ವಾರ್ಡ್‌ಗಳ ಸಂಖ್ಯೆಯನ್ನು 250ಕ್ಕೆ ಹೆಚ್ಚಿಸುವ ನಿರ್ಣಯವನ್ನು ವಿಧಾನಸಭೆ ಅಧಿವೇಶನದಲ್ಲಿ  ಚರ್ಚೆ ನಡೆಸಲಾಗುತ್ತದೆ. ಈಗಾಗಲೇ ವಿಧಾನಮಂಡಲ ಜಂಟಿ ಸಲಹಾ ಸಮಿತಿ ತನ್ನ ಶಿಫಾರಸ್ಸನ್ನು ಸರ್ಕಾರಕ್ಕೆ ರವಾನೆ ಮಾಡಿದ್ದು, ಈ ಕುರಿತಂತೆ ಶಾಸಕ ಎಸ್‌.ರಘು ಅಧ್ಯಕ್ಷತೆಯಲ್ಲಿ ಸಮಿತಿ ಸದಸ್ಯರು ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಸೋಮವಾರ ಸಂಜೆ ಭೇಟಿ ಮಾಡಿ ಚರ್ಚೆ ನಡೆಸಿದರು. ಅಲ್ಲದೆ  ಸಿಎಂ ಕೂಡ ಈ ನಿರ್ಣಯವನ್ನು ಮಂಡನೆ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ. 

ಈ ಬಗ್ಗೆ ಮಾಹಿತಿ ನೀಡಿರುವ ಶಾಸಕ ಎಸ್‌.ರಘು ಅವರು, 'ಈ ಪ್ರಸ್ತಾಪಕ್ಕೆ ಪಕ್ಷದ ವ್ಯಾಪ್ತಿಯಲ್ಲಿ ಅನುಮೋದನೆ ದೊರೆತಿದ್ದು, ಅಂತಿಮ ಅಧಿಕೃತ ಮುದ್ರೆಯ ಅಗತ್ಯವಿದೆ. ಇದೀಗ ಈ ನಿರ್ಣಯವನ್ನು ವಿಧಾನಸಭೆಯಲ್ಲಿ ಮಂಡಿಸಲಾಗುವುದು. ಅಂತೆಯೇ ಈ ನಿರ್ಣಯದಿಂದ ಬಿಬಿಎಂಪಿ ಕೌನ್ಸಿಲ್ ಚುನಾವಣೆಗೆ  ಯಾವುದೇ ರೀತಿಯ ತೊಡಕಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ವಾರ್ಡ್ ಗಳ ಗಾತ್ರ ಮತ್ತು ಜನಸಂಖ್ಯೆ ಆಧಾರದ ಮೇಲೆ ವಾರ್ಡ್ ಗಳನ್ನು ವಿಭಜಿಸಲಾಗುತ್ತದೆ. ಈ ಸಂಬಂಧ ಕಳೆದ 15 ದಿನಗಳಲ್ಲಿ ಸಮಿತಿ 5 ಸಭೆ ನಡೆಸಿದ್ದು, ಬಿಬಿಎಂಪಿ ಮೇಯರ್ ಮತ್ತು ಉಪ ಮೇಯರ್ ಗಳ ಅಧಿಕಾರಾವಧಿ ವಿಸ್ತರಣೆ ಕುರಿತೂ ಕೂಡ  ಚರ್ಚೆ ನಡೆಸಲಾಗಿದೆ. ಅಲ್ಲದೆ ವಲಯ ಆಯುಕ್ತರ ನೇಮಕ ಸಂಬಂಧ ಮತ್ತು ಸ್ಥಾಯಿ ಸಮಿತಿ ಸಂಖ್ಯೆಗಳನ್ನು 12ರಿಂದ 8ಕ್ಕೆ ಇಳಿಸುವ ಸಂಬಂಧ ನಿರ್ಣಯಕೈಗೊಳ್ಳಲಾಗಿದೆ. 

ಬಿಬಿಎಂಪಿ ವಿಭಜನೆ ಅನಿವಾರ್ಯವಾಗಿದ್ದು, ಕಾನೂನು ಕಾರ್ಯದರ್ಶಿ ಕೂಡ ವಿಧಾನಸಭೆಯಲ್ಲಿ ತೆರಿಗೆ ಪರಿಷ್ಕರಣೆಯನ್ನು ಪ್ರಸ್ತಾಪಿಸಲಿದ್ದಾರೆ. ಆದರೆ ಇಡೀ ರಾಜ್ಯ ಕೊರೋನಾ ಸಾಂಕ್ರಾಮಿಕದಿಂದಾಗಿ ತೀವ್ರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದೆ. ನಗರದಲ್ಲಿ ತೆರಿಗೆ ಸಂಗ್ರಹ ಕಡಿಮೆ ಆಗುತ್ತಿದೆ. ಸಾಕಷ್ಟು ಜನರು ಆಸ್ತಿ ತೆರಿಗೆ ಕಟ್ಟದೇ ತಪ್ಪಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವುದು ಹೇಗೆ ಎಂಬ ಚರ್ಚೆ ನಡೆಯಿತು. ಮುಂದಿನ ಸಭೆಯಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು. ತೆರಿಗೆ ಸಂಗ್ರಹದಲ್ಲಿ ಶೇ 35 ರಷ್ಟು ಸೋರಿಕೆ ಆಗುತ್ತಿದೆ. 10 ಸಾವಿರ ಕೋಟಿ ನಿಗದಿ ಮಾಡಿದ್ದರೂ 2,600 ಕೋಟಿಯಿಂದ 2 ,800 ಕೋಟಿಯಷ್ಟೇ ಸಂಗ್ರಹ ಆಗುತ್ತಿದೆ. ತೆರಿಗೆ ಸಂಗ್ರಹ ಹೆಚ್ಚಿಸಲು ಕಟ್ಟುನಿಟ್ಟಿನ ಕ್ರಮ ಅಗತ್ಯವಿದೆ ಎಂದು ರಘು ಹೇಳಿದರು.

SCROLL FOR NEXT