ರಾಜ್ಯ

ರೈತ ಸಂಘಟನೆಗಳಿಂದ ಸೋಮವಾರ ಕರ್ನಾಟಕ ಬಂದ್

Lingaraj Badiger

ಬೆಂಗಳೂರು: ರೈತ ವಿರೋಧಿ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ವಿವಿಧ ರೈತಪರ ಸಂಘಟನೆಗಳು ಸೋಮವಾರ ಕರ್ನಾಟಕ ಬಂದ್ ಗೆ ಕರೆ ನೀಡಿವೆ.

ಕೇಂದ್ರ ಸರ್ಕಾರದ ರೈತ, ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಸೆಪ್ಟೆಂಬರ್ 28ರಂದು ಕರ್ನಾಟಕ ಬಂದ್ ಕರೆ ನೀಡಲಾಗಿದೆ. ಅಗತ್ಯ ಸೇವೆ ಹೊರತುಪಡಿಸಿ ಸಂಪೂರ್ಣ ಬಂದ್ ಆಚರಿಸಲಾಗುವುದು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು ಹೇಳಿದ್ದಾರೆ.

ಸೋಮವಾರ ಬಂದ್ ಗೆ ಕರೆ ನೀಡುವ ಬಗ್ಗೆ ಚರ್ಚೆ ನಡೆಯುತ್ತಿತ್ತು. ನಮ್ಮ ಒತ್ತಾಯಕ್ಕೆ ಮಣಿದು ಮಸೂದೆಯನ್ನ ತಡೆ ಹಿಡಿಯಬಹುದು ಎಂಬ ವಿಶ್ವಾಸವಿತ್ತು. ಆದರೆ ಸರ್ಕಾರದ್ದು ಮೊಸಳೆ ಕಣ್ಣೀರು ಎಂಬುವುದು ಖಚಿತವಾಗಿದೆ. ಬೀದಿಯಲ್ಲಿ ನಾವು ಪ್ರತಿಭಟನೆ ಮಾಡುತ್ತಿದ್ದರೂ ನಮ್ಮನ್ನು ಮಾತನಾಡಿಸಲು ಸರ್ಕಾರ ಮುಂದಾಗಿಲ್ಲ. ಶುಕ್ರವಾರ ನಗರದಲ್ಲಿ ಬೃಹತ್ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇದೊಂದು ಕಾಪೋರೇಟ್ ಸರ್ಕಾರವಾಗಿದ್ದು, ಮಸೂದೆ ಬಗ್ಗೆ ರೈತರ ಸಲಹೆ ಸಹ ಪಡೆದುಕೊಂಡಿಲ್ಲ. ಎಪಿಎಂಸಿ ಮಸೂದೆ ರೈತರ ಮರಣ ಶಾಸನವಾಗಿದೆ. ಬಂಡವಾಳ ಶಾಹಿ ಸರ್ಕಾರ ಇದಾಗಿದೆ. ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದಷ ಸಿಎಂ ಯಡಿಯೂರಪ್ಪನವರ ಮುಖವಾಡ ಬಯಲಾಗಿದೆ ಎಂದು ಕಿಡಿಕಾರಿದರು.

ಸೆಪ್ಟೆಂಬರ್ 25ರಂದು ಕರೆ ನೀಡಲಾಗಿರುವ ಭಾರತ್ ಬಂದ್ ಜೊತೆಗೆ ಕರ್ನಾಟಕಲ್ಲೂ ಬಂದ್ ಆಚರಿಸಲು ಈ ಮೊದಲು ರೈತ ಸಂಘಟನೆಗಳು ಯೋಜಿಸಿದ್ದವು. ಆದರೆ, 25ರಂದು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಮಾಡಬೇಕೆಂದು ತೀರ್ಮಾನಿಸಲಾಗಿದ್ದು, ಸೆಪ್ಟೆಂಬರ್ 28ರಂದು ಕರ್ನಾಟಕ ಬಂದ್ ಗೆ ಕರೆ ನೀಡಿವೆ.

SCROLL FOR NEXT