ರಾಜ್ಯ

ತಿರುಮಲದಲ್ಲಿ 'ಕರ್ನಾಟಕ ಯಾತ್ರಾರ್ಥಿಗಳ ಭವನ'ಕ್ಕೆ ಕರ್ನಾಟಕ, ಆಂಧ್ರ ಮುಖ್ಯಮಂತ್ರಿಗಳಿಂದ ಭೂಮಿ ಪೂಜೆ

Manjula VN

ತಿರುಮಲ: ತಿರುಮಲದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಸುಮಾರು 200 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಿರುವ ಯಾತ್ರಾರ್ಥಿಗಳ ಭವನ ನಿರ್ಮಾಣಕ್ಕೆ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಗುರುವಾರ ಬೆಳಗ್ಗೆ ಜಂಟಿಯಾಗಿ ಭೂಮಿ ಪೂಜೆ ನೆರೆವೇರಿಸಿದರು.

ತಿರಮಲದಲ್ಲಿರುವ ಕರ್ನಾಟಕ ಚಾರೀಟೀಸ್ ಗೆ 7.5 ಎಕರೆ ಭೂಮಿಯನ್ನು 50 ವರ್ಷಗಳ ಅವಧಿಗೆ 2008 ರಲ್ಲಿ ತಿರುಮಲ ತಿರುಪತಿ ದೇವಸ್ಥಾನ ಗುತ್ತಿಗೆಗೆ ನೀಡಿದೆ. ಈ ಸ್ಥಳದಲ್ಲಿ ಟಿಟಿಡಿ ನಿಬಂಧನೆಗಳಂತೆ 200 ಕೋಟಿ ರೂ ವೆಚ್ಚದಲ್ಲಿ ಯಾತ್ರಾರ್ಥಿಗಳ ಭವನ ನಿರ್ಮಿಸಲು ಕಳೆದ ಜುಲೈನಲ್ಲಿ ಕರ್ನಾಟಕ ರಾಜ್ಯ ಸರ್ಕಾರ, ಟಿಟಿಡಿ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಇದಕ್ಕೂ ಮುನ್ನ ಕರ್ನಾಟಕ ಸರ್ಕಾರದ ಮುಜರಾಯಿ ಆಯುಕ್ತೆ ರೋಹಿಣಿ ಸಿಂಧೂರಿ ಪವರ್ ಪಾಯಿಂಟ್ ಪ್ರಸಂಟೇಷನ್ ಮೂಲಕ ನೂತನವಾಗಿ ನಿರ್ಮಿಸಲಿರುವ ಯಾತ್ರಾರ್ಥಿ ಭವನದ ವಿವರ ನೀಡಿದರು. ಇದರಲ್ಲಿ 242 ಯಾತ್ರಿಕರ ಕೊಠಡಿಗಳು, 32 ಸೂಟ್ ರೂಂ ಗಳು, 12 ಡಾರ್ಮೆಟರಿ ಗಳು, ಕಲ್ಯಾಣ ಮಂಟಪ, ಭೋಜನ ಶಾಲೆಯೊಂದಿಗೆ ಪ್ರಸ್ತುತ ಇರುವ ಪುಷ್ಕರಣಿಯನ್ನು ಪುನರುಜ್ಜೀವನಗೊಳಿಸಲಾಗುವುದು. ಟಿಟಿಡಿ ಈ ನಿರ್ಮಾಣಗಳನ್ನು ಪೂರ್ಣಗೊಳಿಸಿ ಕರ್ನಾಟಕ ಸರ್ಕಾರಕ್ಕೆ ಹಸ್ತಾಂತರಿಸಲಿದೆ

ಕಾರ್ಯಕ್ರಮದಲ್ಲಿ ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ನಾರಾಯಣ ಸ್ವಾಮಿ, ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ. ಕರ್ನಾಟಕದ ಮುಜರಾಯಿ ಸಚಿವ ಶ್ರೀನಿವಾಸ ಪೂಜಾರಿ ಟಿಟಿಡಿ ಇಓ ಅನಿಲ್ ಕುಮಾರ್ ಸಿಂಘಾಲ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

SCROLL FOR NEXT