ರಾಜ್ಯ

ಡಿಜೆ ಹಳ್ಳಿ ಗಲಭೆ ಪ್ರಕರಣ: ಪ್ರಮುಖ ಸಂಚುಕೋರನ ಬಂಧನ

Manjula VN

ಬೆಂಗಳೂರು: ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ರಾಷ್ಟ್ರೀಯ ತನಿಖಾ ದಳ, ಎಸ್'ಡಿಪಿಐ ಕಚೇರಿ ಸೇರಿದಂತೆ ಗುರುವಾರ ಸುಮಾರು 30ಕ್ಕೂ ಹೆಚ್ಚಿನ ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದು, ಪ್ರಕರಣ ಸಂಬಂಧ ಪ್ರಮುಖ ಸಂಚುಕೋರನೊಬ್ಬನನ್ನು ಬಂಧಕ್ಕೊಳಪಡಿಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಕೆಜಿ ಹಳ್ಳಿಯ ಸೈಯದ್ ಸಾದಿಕ್ ಎಂಬಾತನನ್ನು ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದು, ಕೆಜಿ ಹಳ್ಳಿ ಠಾಣೆ ಮೇಲಿನ ದಾಳಿಯಲ್ಲಿ ಆತನ ಪ್ರಮುಖ ಪಾತ್ರವಿದೆ ಎಂದು ಹೇಳಲಾಗುತ್ತಿದೆ. ಇನ್ನು ಕಾರ್ಯಾಚರಣೆ ವೇಳೆ ಏರ್'ಗನ್, ಪೆಲ್ಲೆಟ್ಸ್, ಕಬ್ಬಿಣದ ಸಲಾಕೆಗಳು, ಮಾರಕಾಸ್ತ್ರಗಳು, ಡಿಜಿಟಲ್ ಡಿವೈಸ್ಸ್, ಡಿವಿಆರ್ ಹಾಗೂ ಎಸ್'ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳಿಗೆ ಸಂಬಂಧಿಸಿ ದಾಖಲೆಗಳು ಜಪ್ತಿಯಾಗಿವೆ. 

ಕೆಜಿ ಹಳ್ಳಿಯ ಸೈಯದ್ ಸಾದಿಕ್ ಖಾಸಗಿ ಬ್ಯಾಂಕ್'ಗಳ ಸಾಲ ವಸೂಲಾತಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ. ಸ್ಥಳೀಯವಾಗಿ ಎಸ್'ಡಿಪಿಐ ಸಂಘಟನೆ ಜೊತೆ ಗುರುತಿಸಿಕೊಂಡಿದ್ದ ಆದ, ಆ.11ರಂದು ರಾತ್ರಿ ಕೆಜಿ ಹಳ್ಳಿ ಠಾಣೆ ಮೇಲೆ ದಾಳಿಗೆ ಪ್ರಮುಖ ಸಂಚುಕೋರನಾಗಿದ್ದ. ದಾಳಿ ಬಳಿಕ ತಲೆಮರೆಸಿಕೊಂಡಿದ್ದ ಎಂದು ಎನ್ಐಎ ಮಾಹಿತಿ ನೀಡಿದೆ. 

ಈ ಗಲಭೆ ಪ್ರಕರಣದ ಕೆಲ ಆರೋಪಿಗಳಿಗೆ ಭಯೋತ್ಪಾದಕ ಸಂಘಟನೆಗಳ ನಂಟು ಹೊಂದಿರುವುದು ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರವು, ಹೆಚ್ಚಿನ ತನಿಖೆ ತಲುವಾಗಿ ಎನ್ಐಎಗೆ ವಹಿಸಿದೆ. 

ಐಜಿಪಿ ನೇತೃತ್ವದ ತನಿಖೆ ಆರಂಭಿಸಿರುವ ಎನ್ಐಎ ವಿಶೇಷ ತಂಡವು, ಗುರುವಾರ ಸ್ಥಳೀಯ ಪೊಲೀಸರು ಸಹಕಾರದಲ್ಲಿ ಗಲಭೆ ಪೀಡಿತ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿದೆ. ಹಲಸೂರು ಗೇಟ್, ದೇವರ ಜೀವನ ಹಳ್ಳಿ (ಡಿಡೆ ಹಳ್ಳಿ) ಹಾಗೂ ಕೆಜಿ ಹಳ್ಳಿಯಲ್ಲಿರುವ ಎಸ್'ಡಿಪಿಐ ಕಚೇರಿಗಳಲ್ಲಿ ಎನ್ಐಎ ಶೋಧ ನಡೆಸಿದೆ ಎಂದು ತಿಳಿದುಬಂದಿದೆ. ಅಲ್ಲದೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳಾದ ಎಸ್'ಡಿಪಿಐನ ಬೆಂಗಳೂರು ಘಟಕ ಕಾರ್ಯದರ್ಶಿ ಸೈಯದ್ ಮುಜಾಮಿಲ್, ಸ್ಥಳೀಯ ಕಾಂಗ್ರೆಸ್ ಮುಖಂಡ ಹಾಗೂ ಖಲೀಂ ಪಾಷ, ಪುಲಿಕೇಶಿ ನಗರದ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ವಾಜಿದ್ ಪಾಷ, ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಆಪ್ತ ಸಹಾಯಕ ಅರುಣ್, ಭಯೋತ್ಪಾದಕ ಸಂಘಟನೆಗಳ ಜೊತೆ ನಂಟು ಆರೋಪ ಎದುರಿಸುತ್ತಿರುವ ಸಮೀವುದ್ದೀನ್ ಹಾಗೂ ಫೈರೋಜ್ ಪಾಷನ ಮನೆ ಹಾಗೂ ಕಚೇರಿಗಳ ಮೇಲೆ ಎನ್ಐಎ ಕಾರ್ಯಾಚರಣೆ ನಡೆಸಿದೆ ಎಂದು ಹೇಳಲಾಗುತ್ತಿದೆ. 

SCROLL FOR NEXT