ರಾಜ್ಯ

ಜಾರಿ ನಿರ್ದೇಶನಾಲಯದಿಂದ ಕಣ್ವ ಗ್ರೂಪ್‍ ನ 255.17 ಕೋಟಿ ರೂ ಮೊತ್ತದ ಆಸ್ತಿ ಮುಟ್ಟುಗೋಲು

Lingaraj Badiger

ಬೆಂಗಳೂರು: ಪೊಂಜಿ ಯೋಜನೆಯಲ್ಲಿ ಹೂಡಿಕೆದಾರರಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ(ಇಡಿ) ಶುಕ್ರವಾರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ನಿಬಂಧನೆಗಳಡಿ ಕಣ್ವ ಗ್ರೂಪ್‍ ನ 255.17 ಕೋಟಿ ರೂ ಮೊತ್ತದ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ.

ಮುಟ್ಟುಗೋಲು ಹಾಕಿಕೊಳ್ಳಲಾದ ಸ್ವತ್ತುಗಳಲ್ಲಿ ಕೃಷಿ ಮತ್ತು ಕೃಷಿಯೇತರ ಭೂಮಿ, ಕಟ್ಟಡಗಳು, ರೆಸಾರ್ಟ್‌ಗಳು ಮತ್ತು ಚರಾಸ್ತಿ ರೂಪದಲ್ಲಿ ಎನ್ ನಂಜುಂಡಯ್ಯ ಮತ್ತು ಅವರ ಕುಟುಂಬ ಸದಸ್ಯರ ಕಣ್ವ ಗ್ರೂಪ್ ಆಫ್ ಕಂಪೆನಿಗಳು ಮತ್ತು ಇತರ ಘಟಕಗಳ ಹೆಸರಿನಲ್ಲಿ ತೆರೆಯಲಾಗಿದ್ದ ಬ್ಯಾಂಕ್‍ ಖಾತೆಗಳು ಒಳಗೊಂಡಿವೆ.

ಹೆಚ್ಚು ಬಡ್ಡಿ ಆಮಿಷದೊಂದಿಗೆ ಠೇವಣಿದಾರರಿಂದ 650 ಕೋಟಿ ರೂ.ಗೂ ಹೆಚ್ಚು ಹಣವನ್ನು ಸಂಗ್ರಹಿಸಿ ವಂಚಿಸಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ ಶ್ರೀ ಕಣ್ವ ಸೌಹಾರ್ದ ಸಹಕಾರಿ ಕ್ರೆಡಿಟ್ ನಿಯಮಿತ(ಎಸ್‌ಕೆಎಸ್‌ಸಿಸಿಎಲ್)ದ ಎನ್‍ ನಂಜುಂಡಯ್ಯ ವಿರುದ್ಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿತ್ತು. ಅಲ್ಲದೆ, ಸಹಕಾರಿ ಸಂಘಗಳ ನೋಂದಣಾಧಿಕಾರಿ ಕಚೇರಿಯಲ್ಲಿ ದೂರು ಸಲ್ಲಿಸಲಾಗಿತ್ತು.

ಪಿಎಂಎಲ್‌ಎ ಅಡಿ ಕೇಸ್ ದಾಖಲಿಸಿದ್ದ ಇಡಿ, ಆರೋಪಿಗಳಾದ ಎನ್ ನಂಜುಂಡಯ್ಯ ಮತ್ತು ಶ್ರೀ ಕಣ್ವ ಸೌಹಾರ್ದ ಸಹಕಾರಿ ಕ್ರೆಡಿಟ್ ಲಿಮಿಟೆಡ್ ಮತ್ತು ಕಣ್ವಾ ಗ್ರೂಪ್ ಕಂಪೆನಿಗಳ ಮೇಲೆ ದಾಳಿ ನಡೆಸಿತ್ತು.

SCROLL FOR NEXT