ರಾಜ್ಯ

ಕರ್ನಾಟಕದ ಉದಯೋನ್ಮುಖ ಕಬಡ್ಡಿ ಆಟಗಾರನ ಕನಸಿಗೆ ತಣ್ಣೀರೆರಚಿದ ರಾಷ್ಟ್ರೀಯ ಅಸೋಸಿಯೇಷನ್

Manjula VN

ಮಂಗಳೂರು: ಈ ಬಾರಿಯ ರಾಷ್ಟ್ರೀಯ ಕಬಡ್ಡಿ ತಂಡ ಸೀನಿಯರ್ ವಿಭಾಗದ ಸಂಭಾವ್ಯ ಆಟಗಾರರ ಯಾದಿಯಲ್ಲಿ ಸ್ಥಾನ ಪಡೆದುಕೊಂಡಿದ್ದ ರಾಜ್ಯದ ಏಕೈಕ ಕಬಡ್ಡಿ ಪಟುವಿಗೆ ತರಬೇತಿ ಶಿಬಿರಕ್ಕೆ ಪಾಲ್ಗೊಳ್ಳಲು ಆಹ್ವಾನ ನೀಡದೆ ತಡೆಯೊಡ್ಡಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ. 

ಐವರ್ನಾಡು ಗ್ರಾಮದ ಪಾಲೆಪ್ಪಾಡಿ ನಿವಾಸಿಯಾಗಿರುವ ಉಜಿರೆ ಎಸ್‌ಡಿಎಂ ಕಾಲೇಜಿನ ಹಳೆ ವಿದ್ಯಾರ್ಥಿ ಸಚಿನ್‌ ಪ್ರತಾಪ್‌ ಮೊದಲ ಹಂತದ ಆನ್‌ಲೈನ್‌ ತರಬೇತಿಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗದಿರುವ ಕ್ರೀಡಾಪಟು ಆಗಿದ್ದಾರೆ. 

ನಿಮ್ಮ ಆಯ್ಕೆ ಪ್ರಕ್ರಿಯೆಗೆ ತಡೆ ನೀಡಲಾಗಿದೆ ಎಂದು ಉತ್ತರ ದೆಹಲಿಯ ರಾಷ್ಟ್ರೀಯ ಅಮೆಚೂರ್ ಅಸೋಸಿಯೇಶನ್ ಉತ್ತರ ನೀಡಿದ್ದು, ಇದರಿಂದಾಗಿ ಹಳ್ಳಿಗಾಡಿನ ಪ್ರತಿಭೆಗೆ ಅವಕಾಶ ಕೈತಪ್ಪುವ ಆತಂಕ ಶುರುವಾಗಿದೆ. 

ಕೋವಿಡ್ ಕಾರಣದಿಂದ ಮುಂದೂಡಿದ್ದ ತರಬೇತಿ ಶಿಬಿರದ ಪ್ರಥಮ ಅವಧಿ ಆನ್‌ಲೈನ್‌ ಕ್ಲಾಸ್‌ ತರಗತಿಗಳು ಕೆಲ ದಿನಗಳ ಹಿಂದೆ ಮುಗಿದಿದ್ದು,  ತರಬೇತಿಗೆ ಪಾಲ್ಗೊಳ್ಳಲು ದೆಹಲಿಯಲ್ಲಿರುವ ರಾಷ್ಟ್ರೀಯ ಕಬಡ್ಡಿ ಅಸೋಸಿಯೇಶನ್‌ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಪ್ರತಾಪ್‌ ಅವರ ಹೆಸರನ್ನು ಕೈ ಬಿಡಲಾಗಿದೆ ಎಂದು ತಿಳಿದುಬಂದಿದೆ. 

ಪ್ರತಾಪ್ ಅವರ ಹೆಸರು ಬಿಟ್ಟು ಉಳಿದೆಲ್ಲಾ ರಾಜ್ಯಗಳಿಂದ ಆಯ್ಕೆಗೊಂಡಿರುವ 27 ಆಟಗಾರರ ಹೆಸರುಗಳೂ ಪಟ್ಟಿಯಲ್ಲಿರುವುದು ಕಂಡು ಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಸೋಸಿಯೇಷನ್ ಆಯ್ಕೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ ಎಂದು ಹೇಳುತ್ತಿದ್ದಾರೆ. 

ಈ ಬಗ್ಗೆ ಮಾತನಾಡಿರುವ ಜಿಲ್ಲಾ ಪಂಚಾಯತ್ ಸದಸ್ಯ ಎಸ್ ಎನ್ ಮನ್ಮಥ ಅವರು, ಸಚಿನ್ ರಾಜ್ಯದ ಉದಯೋನ್ಮುಖ ಕಬಡ್ಡಿ ಆಟಗಾರ ಮತ್ತು ಇಂತಹ ಗ್ರಾಮೀಣ ಪ್ರತಿಭೆಗಳನ್ನು ಬೆಂಬಲಿಸಬೇಕಾಗಿದೆ. ದೇಶದ ಪರವಾಗಿ ಆಡುವ ಆಸೆಯನ್ನು ಸಚಿನ್ ಇಟ್ಟುಕೊಂಡಿದ್ದರು, ಇದೀಗ ಆಯ್ಕೆ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದು ನಿಜಕ್ಕೂ ಬೇಸರವನ್ನು ತಂದಿದೆ ಎಂದು ಹೇಳಿದ್ದಾರೆ. 

ತರಬೇತಿ ವೇಳೆ ಸರಿಯಾಗಿ ಪ್ರದರ್ಶನ ನೀಡದೇ ಹೋಗಿದ್ದರೆ, ಇಂತಹ ನಿರ್ಧಾರಗಳನ್ನು ಸಮರ್ಥಿಸಿಕೊಳ್ಳಬಹುದಿತ್ತು. ಇದು ಗ್ರಾಮೀಣ ಪ್ರದೇಶದ ಉದಯೋನ್ಮುಖ ಕ್ರೀಡಾಪಟುವಿಗೆ ಮಾಡಿರುವ ಅನ್ಯಾಯವಾಗಿದೆ ”ಎಂದು ತಿಳಿಸಿದ್ದಾರೆ. 

ಅವಕಾಶ ಕೈತಪ್ಪಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಬೆಳ್ತಂಗಡಿ ಶಾಸಕರ ಹರೀಶ್ ಪೂಂಜಾ ಅವರನ್ನು ಸಚಿನ್ ಅವರು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. 

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಇದೀಗ ಪ್ರತಿಕ್ರಿಯೆ ನೀಡಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಸಿ ಟಿ ರವಿ ಅವರು, ರಾಷ್ಟ್ರೀಯ ಕಬಡ್ಡಿ ಅಸೋಸಿಯೇಷನ್ ಜೊತೆಗೆ ಮಾತುಕತೆ ನಡೆಸಿ ಶೀಘ್ರದಲ್ಲಿಯೇ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ಹೇಳಿದ್ದಾರೆ. 

SCROLL FOR NEXT