ರಾಜ್ಯ

ರೈತ ಕುಟುಂಬದಿಂದ ಬಂದ ನಾನು ಸದಾಕಾಲ ರೈತರ ಪರವಾಗಿಯೇ ಇರುತ್ತೇನೆ, ಕಾಯ್ದೆಯಿಂದ ರೈತರಿಗೆ ಅನ್ಯಾಯವಾಗದು: ಸಿಎಂ ಯಡಿಯೂರಪ್ಪ

Manjula VN

ಬೆಂಗಳೂರು: ನಾನು ರೈತನ ಪುತ್ರನಾಗಿದ್ದು, ಸದಾಕಾಲ ರೈತರ ಪರವಾಗಿಯೇ ಇರುತ್ತೇನೆ. ಕಾಯ್ದೆಯಿಂದ ರೈತರಿಗೆ ಅನ್ಯಾಯವಾಗುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೋಮವಾರ ಹೇಳಿದ್ದಾರೆ. 

ಕೃಷಿ ಮಸೂದೆಗಳನ್ನು ವಿರೋಧಿಸಿ ಕರ್ನಾಟಕ ಬಂದ್ ವಿಚಾರ ಸಂಬಂಧ ಗೃಹ ಕಚೇರಿಯಲ್ಲಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ಸಂಘಟನೆಗಳು, ಕಾಂಗ್ರೆಸ್‌ನವರ ಪಿತೂರಿಯಿಂದ ಧರಣಿ ನಡೆಯುತ್ತಿದೆ. ರೈತ ಮುಖಂಡರನ್ನು ಕರೆಸಿ ಮಾತಾಡುವ ಪ್ರಯತ್ನ ಮಾಡಿದ್ದೆ. ಈ ಕಾಯ್ದೆಗಳಿಂದ ಆಗುವ ಅನುಕೂಲದ ಬಗ್ಗೆ ವಿವರಿಸಿದ್ದೇನೆ. ಆದರೆ, ಅವರು ಪ್ರತಿಭಟನೆ ಮಾಡುವ ಉದ್ದೇಶದಿಂದ ಬಂದಿದ್ದಾರೆ. ನಾನು ಅಧಿಕಾರಕ್ಕಾಗಿ ಅಂಟಿ ಕುಳಿತಿಲ್ಲ, ರೈತರ ಪರವಾಗಿ ಇದ್ದೇನೆ. ರೈತರಿಗೆ ಕೆಟ್ಟದ್ದಾಗಲೂ ನಾನು ಎಂದಿಗೂ ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರು ತಮ್ಮ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಬಹುದು. ಎಪಿಎಂಸಿ ಬಾಗಿಲನ್ನು ನಾವು ಮುಚ್ಚಿಲ್ಲ. ರೈತರು ಎಪಿಎಂಸಿಯಲ್ಲಿ ಬೇಕಾದರೂ ಬೆಳೆ ಮಾರಾಟ ಮಾಡಬಹುದಾಗಿದೆ. 6 ತಿಂಗಳಿಂದ 1 ವರ್ಷದವರೆಗೆ ನೋಡಿ ನಿಮಗೇ ತಿಳಿಯುತ್ತದೆ ಎಂದು ತಿಳಿಸಿದ್ದಾರೆ. 

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿಚಾರವಾಗಿ ಈ ತಿದ್ದುಪಡಿಯಿಂದ ಯಾರು ಬೇಕಾದರೂ ಕೃಷಿ ಮಾಡಬಹುದು. ಕೃಷಿಗೆ ಉಪಯೋಗವಿಲ್ಲದ ಭೂಮಿಯಲ್ಲಿ ಕೈಗಾರಿಕೆ ನಡೆಸಬಹುದು. ಅದರೆ, ನೀರಾವರಿ ಜಮೀನಿನಲ್ಲಿ ಕೃಷಿಯನ್ನೇ ಮಾಡಬೇಕು. ಈ ರೀತಿಯ ನಿಯಮ ತಿದ್ದುಪಡಿ ವಿಧೇಯಕದಲ್ಲಿ ಇದೆ ಎಂದು ಸ್ಪಷ್ಟಪಡಿಸಿದ್ದಾರೆ. 

ರೈತರನ್ನು ಅನಗತ್ಯವಾಗಿ ಗೊಂದಲದಲ್ಲಿ ದೂಡದಂತೆ ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆ. ರೈತ ಸಂಘಟನೆಗಳಲ್ಲಿ ನಾನು ಈ ಬಗ್ಗೆ ಮನವಿ ಮಾಡುತ್ತೇನೆ. ಪ್ರಧಾನಿ ಮೋದಿ ಒಳ್ಳೆಯ ಉದ್ದೇಶದಿಂದ ಮಸೂದೆಯನ್ನು ಜಾರಿಗೆ ತಂದಿದ್ದಾರೆ. ರೈತರಿಗೆ ಬೇಕಾದ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ಹಣ ನೀಡಲಾಗಿದೆ. ನಾನು ರೈತನ ಪುತ್ರನಾಗಿದ್ದು, ಎಂದಿಗೂ ರೈತರ ಪರವಾಗಿಯೇ ಇರುತ್ತೇನೆ. ನನ್ನಿಂದ ರೈತ ಸಮುದಾಯಕ್ಕೆ ಎಂದೂ ಅನ್ಯಾಯವಾಗುವುದಿಲ್ಲ. ಇಂದು ಚಳವಳಿ ಮಾಡಿ, ಬಳಿಕವಾದರೂ ಚರ್ಚೆಗೆ ಬನ್ನಿ. ಬಿಲ್‌ನಲ್ಲಿ ಏನಾದರೂ ಬದಲಾವಣೆ ಬೇಕಿದ್ದರೆ ಮಾಡೋಣ. ಸುಮ್ಮನೇ ರೈತರನ್ನು ದಾರಿತಪ್ಪಿಸುವ ಕೆಲಸವನ್ನು ಮಾಡಬೇಡಿ ಎಂದು ತಿಳಿಸಿದ್ದಾರೆ. 

SCROLL FOR NEXT