ರಾಜ್ಯ

ಬೆಂಗಳೂರಿನಲ್ಲಿ ಕೋವಿಡ್-19 ಹೆಚ್ಚಳ: ಹೋಂ ಐಸೊಲೇಷನ್ ನಿಯಮ ಉಲ್ಲಂಘನೆಯೇ ಕಾರಣ; ವೈದ್ಯರ ಅಭಿಮತ

Sumana Upadhyaya

ಬೆಂಗಳೂರು: ಕೋವಿಡ್-19 ರೋಗದ ಗುಣಲಕ್ಷಣಗಳು ಇಲ್ಲದಿರುವ, ಅಧಿಕ ಆರೋಗ್ಯ ಸಮಸ್ಯೆ ಹೊಂದಿಲ್ಲದಿರುವವರಿಗೆ ಹೋಂ ಐಸೊಲೇಷನ್ ಆಯ್ಕೆ ನೀಡುತ್ತಿರುವುದು ವೈದ್ಯರಿಗೆ ಆತಂಕವನ್ನುಂಟುಮಾಡಿದೆ.

ಹೋಂ ಐಸೊಲೇಷನ್ ಹೊಂದಿರುವ ಹಲವರು ಮನೆಯಲ್ಲಿದ್ದುಕೊಂಡು ಇತರರಿಗೆ ಸೋಂಕು ಹರಡಿಸಬಹುದು, ಇದರಿಂದ ಮತ್ತಷ್ಟು ಕೊರೋನಾ ಹರಡಬಹುದು ಎಂಬ ಆತಂಕ ವೈದ್ಯಲೋಕದಲ್ಲಿ ಉಂಟಾಗಿದೆ. ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ, ಬೆಡ್ ಗಳ ಸಮಸ್ಯೆಯಿದೆ ಎಂದು ಕಡಿಮೆ ಗುಣಲಕ್ಷಣಗಳು, ಹೆಚ್ಚು ಅಪಾಯವಿಲ್ಲದಿರುವ ಪಾಸಿಟಿವ್ ಹೊಂದಿರುವವರಿಗೆ ಹೋಂ ಐಸೊಲೇಷನ್ ಆಯ್ಕೆ ನೀಡಲಾಗುತ್ತದೆ.

ಬಿಬಿಎಂಪಿ ಕೊರೋನಾ ರೋಗ ಲಕ್ಷಣರಹಿತ ಮತ್ತು ಕಡಿಮೆ ರೋಗಲಕ್ಷಣ ಹೊಂದಿರುವವರಿಗೆ ತೆರೆದಿದ್ದ ಕೋವಿಡ್ ಕೇರ್ ಸೆಂಟರ್ ಗಳನ್ನು ಕೆಲವರು ಮನೆಯಲ್ಲಿಯೇ ಪ್ರತ್ಯೇಕವಾಗಿರುತ್ತೇವೆ ಎಂದು ಹೇಳಿದ ಕಾರಣ ಮುಚ್ಚಲಾಗಿದೆ. ಕೆಲವು ಖಾಸಗಿ ಆಸ್ಪತ್ರೆಗಳು ಕೂಡ ಹೋಂ ಐಸೊಲೇಷನ್ ಪ್ಯಾಕೇಜ್ ಗಳನ್ನು ಆರಂಭಿಸಿವೆ.

ಬಿಬಿಎಂಪಿಯ ಬೆಡ್ ಪೋರ್ಟಲ್ ವೆಬ್ ಸೈಟ್ ಪ್ರಕಾರ ಬೆಂಗಳೂರಿನಲ್ಲಿ 19 ಸಾವಿರದ 298 ರೋಗಿಗಳು ಹೋಂ ಐಸೊಲೇಷನ್ ನಲ್ಲಿದ್ದಾರೆ.ಆದರೆ ಇವರಲ್ಲಿ ಬಹುತೇಕ ಮಂದಿ ಮನೆಯಲ್ಲಿದ್ದುಕೊಂಡು ಕೋವಿಡ್ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ಏಸ್ ಸುಹಾಸ್ ಆಸ್ಪತ್ರೆಯ ಡಾ ಜಗದೀಶ್ ಹೀರೇಮಠ್, ಹೋಂ ಐಸೊಲೇಷನ್ ಆಗುವವರಿಂದ ಕುಟುಂಬದ ಇತರ ಸದಸ್ಯರಿಗೆ ಸೋಂಕು ಹರಡುವ ಅವಕಾಶ ಹೆಚ್ಚಾಗಿರುತ್ತದೆ. ನಾಲ್ಕು ಜನರಿರುವ ಕುಟುಂಬದಲ್ಲಿ ಮೂವರಿಗೆ ಸೋಂಕು ಬರುವ ಸಾಧ್ಯತೆ ಹೆಚ್ಚು. ಹೋಂ ಐಸೊಲೇಷನ್ ನಿಂದ ಆಸ್ಪತ್ರೆಗಳ ಮೇಲಿನ ಭಾರ ಕಡಿಮೆಯಾಗಬೇಕು, ಆದರೆ ಅದು ಇನ್ನಷ್ಟು ಹೆಚ್ಚಾಗುತ್ತಿದೆ.

ಮನೆಯಲ್ಲಿರುವ ಹಿರಿಯ ಸದಸ್ಯರಿಗೆ ಸೋಂಕು ತಗುಲಿದರೆ ಪರಿಸ್ಥಿತಿ ಇನ್ನಷ್ಟು ಕಠಿಣವಾಗುವ ಸಾಧ್ಯತೆಯಿದೆ ಎನ್ನುತ್ತಾರೆ ಡಾ ಹೀರೇಮಠ್.

ರೆಗಲ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ ಸೂರಿ ರಾಜು ವಿ, ಕೊರೋನಾ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಯಾವ ರೂಪದಲ್ಲಿಯಾದರೂ ಹರಡಬಹುದು. ಕೋವಿಡ್ ಇರುವವರನ್ನು ಮನೆಗಳಲ್ಲಿ ಪ್ರತ್ಯೇಕವಾದ ಕೋಣೆಯಲ್ಲಿರಿಸಿ ಪ್ರತ್ಯೇಕ ವಾಶ್ ರೂಂ ಸಹ ನೀಡಬೇಕು. ಒಂದು ಬೆಡ್ ರೂಂ ಇರುವ ಮನೆಗಳಲ್ಲಿ ಕೋವಿಡ್-19 ಇರುವವರು ಹೋಂ ಐಸೊಲೇಟ್ ಆದರೆ ಇತರರಿಗೆ ಹರಡುವ ಸಾಧ್ಯತೆ ಅಧಿಕವಾಗಿರುತ್ತದೆ, ಉಳಿದವರು ಹೋಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವುದು ಸಹ ಇಲ್ಲ ಎನ್ನುತ್ತಾರೆ.

ಹೋಮ್ ಐಸೊಲೇಷನ್ ನಿಯಮ ಉಲ್ಲಂಘನೆಯಾಗುತ್ತಿರುವುದರ ಬಗ್ಗೆ ಸರ್ಕಾರ ಗಮನಹರಿಸಬೇಕು. ಕೋವಿಡ್ ಇದ್ದರೂ ಆರಾಮಾಗಿ ಓಡಾಡುತ್ತಿರುವವರನ್ನು ಆಧುನಿಕ ತಂತ್ರಜ್ಞಾನ ಮೂಲಕ ಪತ್ತೆಹಚ್ಚಿ ಅಂತವರು ಕಟ್ಟುನಿಟ್ಟಾಗಿ ಹೋಂ ಐಸೊಲೇಷನ್ ಗೆ ಒಳಗಾಗುವಂತೆ ಮಾಡಬೇಕು ಎಂದು ವೈದ್ಯರು ಹೇಳುತ್ತಾರೆ.

ಆದರೆ ಹೋಂ ಐಸೊಲೇಷನ್ ನಲ್ಲಿರುವ ರೋಗಿಯೊಬ್ಬರು ಬಿಬಿಎಂಪಿ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸುತ್ತಾರೆ. ಇಂದಿರಾನಗರ ನಿವಾಸಿ ಸುರೇಶ್(ಹೆಸರು ಬದಲಿಸಲಾಗಿದೆ) ಎಂಬುವವರಿಗೆ ಕೊರೋನಾ ಪಾಸಿಟಿವ್ ಬಂದಾಗ ಬಿಬಿಎಂಪಿ ಸಿಬ್ಬಂದಿ ಸಂಪರ್ಕಿಸಲಿಲ್ಲವಂತೆ. ಚಿಕಿತ್ಸೆ ಏನು ನೀಡಬೇಕು ಎಂದು ಹೇಳಲಿಲ್ಲವಂತೆ, ಮನೆಗೆ ಬಂದು ತಪಾಸಣೆ ಕೂಡ ಮಾಡಲಿಲ್ಲವಂತೆ.

ಕೋವಿಡ್-19 ವಾರ್ ರೂಂನ ರಾಜ್ಯದ ಮುಖ್ಯಸ್ಥ ಮನೀಶ್ ಮೌದ್ಗಿಲ್, ಹೋಂ ಐಸೊಲೇಷನ್ ಆದವರು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ, ಸಾಮಾಜಿಕ ಅಂತರ ಮರೆಯುತ್ತಾರೆ, ನಿಯಮವನ್ನು ಸರಿಯಾಗಿ ಪಾಲಿಸುವುದಿಲ್ಲ, ಇದರಿಂದ ಸೋಂಕು ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ.

ಬಿಬಿಎಂಪಿ ಸಾರ್ವಜನಿಕ ಆರೋಗ್ಯ ಉಸ್ತುವಾರಿ ರಂದೀಪ್ ಡಿ, ಬಿಬಿಎಂಪಿ ಮನೆಯ ತಪಾಸಣೆ ಮಾಡುತ್ತದೆ. ರೋಗಿ ಪ್ರತ್ಯೇಕ ಕೊಠಡಿ, ಟಾಯ್ಲೆಟ್ ಹೊಂದಿದ್ದರೆ ಅಂತವರನ್ನು ಮಾತ್ರ ಮನೆಯಲ್ಲಿರಲು ಬಿಡಲಾಗುತ್ತದೆ. ನಾವು ನಿರಂತರವಾಗಿ ನಿಗಾ ವಹಿಸುತ್ತಿದ್ದೇವೆ ಎಂದಿದ್ದಾರೆ.

SCROLL FOR NEXT