ರಾಜ್ಯ

ಶಾಲೆ ಸದ್ಯಕ್ಕೆ ಆರಂಭಿಸುವ ಚಿಂತನೆ ಇಲ್ಲ ಎನ್ನುತ್ತಲೇ ಸದ್ದಿಲ್ಲದೆ ಅಗತ್ಯ ಮಾರ್ಗಸೂಚಿ ಸಿದ್ಧಪಡಿಸಿದ ಸರ್ಕಾರ!

Manjula VN

ಬೆಂಗಳೂರು: ರಾಜ್ಯದಲ್ಲಿ ಸದ್ಯಕ್ಕೆ ಶಾಲೆಗಳನ್ನು ಪುನರಾರಂಭಿಸುವ ಚಿಂತನೆಗಳಿಲ್ಲ ಎಂದು ಹೇಳುತ್ತಿರುವ ರಾಜ್ಯ ಸರ್ಕಾರ ಸದ್ದಿಲ್ಲದೆಯೇ ಶಾಲೆಗಳನ್ನು ಪುನರಾರಂಭಿಸಲು ಅಗತ್ಯ ಮಾರ್ಗಸೂಚಿನಗಳನ್ನು ಸಿದ್ಧಪಡಿಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, ಶಾಲೆ ಪುನರ್ ಆರಂಭಿಸಲು ಸರ್ಕಾರ ಯಾವುದೇ ದಿನಾಂಕವನ್ನೂ ನಿಗದಿ ಮಾಡಿಲ್ಲ. ಪಾಲಕರು, ಶಿಕ್ಷಣ ತಜ್ಞರು ಮತ್ತಿತರರ ಜೊತೆಗೆ ಚರ್ಚಿಸಿದ ಬಳಿಕವೇ ಈ ಕುರಿತು ನಿರ್ಧಾರ ತೆಗೆದುಕೊಳ್ಳುತ್ತೇವೆಂದು ಹೇಳಿದ್ದರು. 

ಆದರೆ, ಇಲಾಖೆಯ ಕೆಲ ಅಧಿಕಾರಿಗಳು ಈಗಾಗಲೇ ಶಾಲೆಗಳನ್ನು ಪುನರಾರಂಭಿಸಲು ಅಗತ್ಯ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದೆ ಎಂದು ಹೇಳುತ್ತಿದ್ದಾರೆ. 

2020-21ನೇ ಸಾಲಿನ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು ಈ ಮಾರ್ಗಸೂಚಿ ಸಿದ್ಧಪಡಿಸಿದ್ದು, ಮಾರ್ಗಸೂಚಿಯಲ್ಲಿ ಶಾಲೆಯಲ್ಲಿ ಸ್ವಚ್ಛತೆ, ಶೈಕ್ಷಣಿಕ ವೇಳಾಪಟ್ಟಿ, ಮಕ್ಕಳನ್ನು ಯಾವ ರೀತಿ ಸಿದ್ಧಪಡಿಸಬೇಕು. ಪೋಷಕರು ಯಾವ ರೀತಿ ಮಕ್ಕಳನ್ನು ಸಿದ್ಧಪಡಿಸಬೇಕು, ಕೊರೋನಾ ಮುನ್ನೆಚ್ಚರಿಕೆಗಳಾವುವುಮತ್ತು ಸಮುದಾಯವನ್ನು     ಒಳಗೊಳ್ಳುವ ಮಾರ್ಗಗಳಿವೆ ಎಂದು ಹೇಳಲಾಗುತ್ತಿದೆ. 

ಶಾಲೆಗೆ ಹಾಜರಾಗುವ ವಿದ್ಯಾರ್ಥಿಯು ಕೊರೋನಾ ಸೋಂಕಿನಿಂದ ರಕ್ಷಿಸಿಕೊಳ್ಳುಲು ಬೇಕಾದ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಆಯಾ ಮಗುವಿನ ಪೋಷಕರೇ ಕೈಗೊಳ್ಳಬೇಕು. ಮನೆಯಲ್ಲಿ ಯಾರಿಗಾದರೂ ಕೊರೋನಾ ಸೋಂಕಿದ್ದರೆ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು, ಮಕ್ಕಳಿಗೆ ಮಾಸ್ಕ್ ತೊಡಿಸಬೇಕು. ಕನಿಷ್ಠ ಎರಡು ಮಾಸ್ಕ್ ನೀಡಬೇಕು. ನಿತ್ಯ ಮಾಸ್ಕ್ ಸ್ವಚ್ಛಗೊಳಿಸಬೇಕು. ಇದೆಲ್ಲದರ ಉಸ್ತುವಾರಿ ಹೊಣೆಯನ್ನು ಪೋಷಕರೇ ನಿಭಾಯಿಸಬೇಕು. ಜೊತೆಗೆ, ಮಕ್ಕಳ ಪುಸ್ತಕಗಳ ಬ್ಯಾಗಿನ ಜೊತೆೇಗೆ ಮತ್ತೊಂದು ಬ್ಯಾಗಿನಲ್ಲಿ ಒಂದು ತಟ್ಟೆ, ನ್ಯಾಪ್'ಕಿನ್ ಅಥವಾ ಟವಲ್, ವಾಟರ್ ಬಾಟಲ್ ಮತ್ತು ಸ್ಯಾನಿಟೈಜರ್ ಬಾಟಲ್ ಕಳುಹಿಸಿಕೊಡಬೇಕೆಂದು ಸೂಚಿಸಿದೆ. 

ಶಾಲೆಯ ಆಡಳಿತ ಮಂಡಳಿಗಳು ಶಾಲೆ ಆರಂಭಕ್ಕೂ ಒಂದು ವಾರ ಮೊದಲು ಇಡೀ ಶಾಲೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ಎಲ್ಲಾ ಕೊಠಡಿ, ಪ್ರಯೋಗಾಲಯ, ಪೀಠೋಪಕರಣಗಳು, ಕಿಟಕಿ, ಬಾಗಿಲುಗಳನ್ನು ಸೋಂಕು ನಿವಾರಕದಿಂದ ಸ್ವಚ್ಛಗೊಳಿಸಬೇಕು. ಮಧ್ಯಾಹ್ನದ ಬಿಸಿಯೂಟಕ್ಕೂ ಬಳಸುವ ಪಾತ್ರೆಗಳು, ಆಹಾರ ಧಾನ್ಯ ಸಂಗ್ರಹಿಸಿಡುವ ಡಬ್ಬಿಗಳನ್ನು ನಿತ್ಯ ತೊಳೆಯಬೇಕು ಎಂದೂ ಮಾರ್ಗಸೂಚಿಯಲ್ಲಿ ಹೇಳಲಾಗಿದೆ. 

ಈ ನಡುವೆ ಹೇಳಿಕೆ ನೀಡಿರುವ ಹೆಚ್ಚುವರಿ ಶಿಕ್ಷಣ ಸಚಿವ ಡಾ.ಸಿಎನ್.ಅಶ್ವತ್ಥ ನಾರಾಯಣ ಅವರು, ಯುಜಿಸಿಯ ಮುಂದಿನ ಆದೇಶದವರೆಗೂ ಕಾಲೇಜು ವಿದ್ಯಾರ್ಥಿಗಳಿಗೆ ಆನ್'ಲೈನ್ ನಲ್ಲಿಯೇ ತರಗತಿಗಳು ಮುಂದುವರೆಯಲಿವೆ. ಪ್ರಸ್ತುತ ಯುಜಿಸಿ ಮಾರ್ಗಸೂಚಿಗಳ ಪ್ರಕಾರ, ಪ್ರಥಮ ವರ್ಷದ ಸ್ನಾತಕೋತ್ತರ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ತರಗತಿಗಳು ನವೆಂಬರ್ 1-18ರ ನಡುವೆ ಪ್ರಾರಂಭವಾಗಬೇಕೆಂದು ತಿಳಿಸಿದೆ ಎಂದು ಹೇಳಿದ್ದಾರೆ. 

SCROLL FOR NEXT