ರಾಜ್ಯ

ಕೋವಿಡ್-19: ಸೋಂಕು ನಿಯಂತ್ರಣಕ್ಕೆ 8500 ಬೂತ್ ಮಟ್ಟದ ತಂಡ ರಚನೆ, ಮನೆ-ಮನೆ ಸಮೀಕ್ಷೆಗೆ ಸಿದ್ಧತೆ

Manjula VN

ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕು ಪ್ರಕರಣ ನಿಯಂತ್ರಿಸಲು 8500 ಬುತ್ ಮಟ್ಟದ ಕಾರ್ಯಪಡೆ ರಚಿಸಿ, ಪ್ರತೀ ಮನೆಗಳ ಸಮೀಕ್ಷೆ ಹಾಗೂ ಪರೀಕ್ಷೆ ಮಾಡಲು ಉದ್ದೇಶಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ.ಕೆ.ಸುಧಾಕರ್ ಅವರು ಹೇಳಿದ್ದಾರೆ. 

ಕೊರೋನಾ ನಿಯಂತ್ರಣ ಸಂಬಂಧ ಬಿಬಿಎಂಪಿ, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ಹಿರಿಯ ಅಧಿಕಾರಿಗಳ ಜೊತೆ ವಿಕಾಸಸೌಧದಲ್ಲಿ ನಡೆಸಿದ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ವರದಿಯಾಗುತ್ತಿರುವ ಸೋಂಕಿನ ಪ್ರಕರಣಗಳ ಪೈಕಿ ಶೇ.80ರಷ್ಟು ಬೆಂಗಳೂರಿನಲ್ಲಿ ದಾಖಲಾಗುತ್ತಿವೆ. ಹೀಗಾಗಿ ಹೆಚ್ಚಿನ ನಿಯಂತ್ರಣ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ. 

ಈ ನಿಟ್ಟಿನಲ್ಲಿ ಪಾಲಿಕೆ ಸಿಬ್ಬಂದಿ, ಸರ್ಕಾರೇತರ ಸಂಘಗಳು ಪ್ರತಿನಿಧಿ ಮುಂತಾದವರನ್ನು ಒಳಗೊಂಡ ಬೂತ್ ಮಟ್ಟದ ಕಾರ್ಯಪಡೆ ರಚಿಸಲಾಗುವುದು. ಈ ತಂಡ ಪ್ರತಿ ಮನೆಗೆ ಭೇಟಿ ಮಾಡಿ ಸಮೀಕ್ಷೆ ಮಾಡಲಿದೆ. ಕೊರೋನಾ ಲಕ್ಷಣ ಇರುವವರು, ಲಸಿಕೆ ತಗೆದುಕೊಂಡಿರುವವರು, ಪಾಸಿಟಿವ್ ಬಂದು ಮನೆಯಲ್ಲಿ ಪ್ರತ್ಯೇಕ ವಾಸ ಇರುವವರ ಬಗ್ಗೆ ಮಾಹಿತಿ ಪಡೆದು ಅಗತ್ಯ ಮಾರ್ಗದರ್ಶನ ನೀಡಲಿದೆ ಎಂದು ಹೇಳಿದ್ದಾರೆ. 

ಕಳದ ವರ್ಷ ಕಾರ್ಯಪಡೆ ರಚಿಸಲಾಗಿದ್ದರೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿರಲಿಲ್ಲ. ಆದರೆ, ಈ ಬಾರಿ ಆ ರೀತಿ ಆಗದಂತೆ ಕ್ರಮ ಕೈಗೊಳ್ಳಲಾಗುವುದು. ಪ್ರತಿ ವಾರ್ಡ್'ಗೊಂದರಂತೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗುತ್ತಿದೆ. ಒಟ್ಟು 250 ಆ್ಯಂಬುಲೆನ್ಸ್ ಮಾಡಲಾಗುತ್ತಿದೆ. ಒಟ್ಟು 250 ಆ್ಯಂಬುಲೆನ್ಸ್ ಸಜ್ಜುಗೊಳಿಸಲಾಗಿದೆ. ಅಗತ್ಯವಿದ್ದ ಕಡೆಗೆ ಎರಡು ಆ್ಯಂಬುಲೆನ್ಸ್ ನೀಡಲಾಗುವುದು. ಜನಸಂದಣಿ ಹೆಚ್ಚಿರುವ ಪಬ್, ರೆಸ್ಟೋರೆಂಟ್, ಮಾರ್ಕೆಟ್, ರೈಲ್ವೇ ಬಸ್ ನಿಲ್ದಾಣ ಪ್ರದೇಶಗಳಲ್ಲಿ ಆಗಾಗ ತಪಾಸಣೆ ಮಾಡಬೇಕು. ಜನರ ಜೊತೆಗೆ ಹೆಚ್ಚು ನಿಕಟ ಸಂಪರ್ಕ ಹೊಂದುವವರನ್ನು ಪದೇ ಪದೇ ತಪಾಸಣೆ ನಡೆಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. 

SCROLL FOR NEXT