ರಾಜ್ಯ

ಸಾರಿಗೆ ನೌಕರರ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿ, ಜನಸಾಮಾನ್ಯರ ಪರದಾಟ ತಪ್ಪಿಸಿ- ಎಂ.ಎಸ್. ರಕ್ಷಾ ರಾಮಯ್ಯ

Nagaraja AB

ಬೆಂಗಳೂರು: ಯುಗಾದಿ ಸೇರಿದಂತೆ ಸರಣಿ ಹಬ್ಬಗಳ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಹಠ ಮಾರಿ ಧೋರಣೆಯಿಂದಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರು ಒಂದು ವಾರದಿಂದ ಮುಷ್ಕರ ನಡೆಸುತ್ತಿದ್ದು, ಕೂಡಲೇ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆ ತಪ್ಪಿಸುವಂತೆ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರ ಜನಸಾಮಾನ್ಯರ ಯುಗಾದಿ ಸಂಭ್ರಮವನ್ನು ಕಸಿದುಕೊಂಡಿದೆ. ಹಬ್ಬಗಳ ಸಂದರ್ಭದಲ್ಲಿ ತಮ್ಮ ಊರುಗಳಿಗೆ ತೆರಳುವ ಸಾಮಾನ್ಯ ಜನರ ಕನಸನ್ನು ಭಗ್ನಗೊಳಿಸಿದೆ. ಬಸ್ ಗಳಿಲ್ಲದೇ ಜನಸಾಮಾನ್ಯರು ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ, ಮಧ್ಯ ಕರ್ನಾಟಕ, ಬಯಲು ಸೀಮೆ, ಮೈಸೂರು ಭಾಗ ಸೇರಿದಂತೆ ಯಾವುದೇ ಸ್ಥಳಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಖಾಸಗಿ ಬಸ್ ಗಳ ಮೂಲಕ ಸಮೂಹ ಸಾರಿಗೆ ಸೇವೆ ನೀಡುವುದು ಪರ್ಯಾಯ ಮಾರ್ಗವೇ ಅಲ್ಲ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜನಸಾಮಾನ್ಯರು ತೀವ್ರ ತೊಂದರೆ ಎದುರಿಸುತ್ತಿದ್ದರೂ ಸಹ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಸಾರಿಗೆ ಇಲಾಖೆ ಜವಾಬ್ದಾರಿ ಹೊತ್ತಿರುವ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಏನೂ ಆಗಿಯೇ ಇಲ್ಲವೆನೋ ಎಂಬಂತೆ ವರ್ತಿಸುತ್ತಿರುವುದು ಸರಿಯಲ್ಲ. ಸಾರಿಗೆ ನೌಕರರ ಸಂಘಟನೆ ಜೊತೆಗೆ ಸರ್ಕಾರ ತೋರುತ್ತಿರುವ ವರ್ತನೆ ಪ್ರಜಾಪ್ರಭುತ್ವ  ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಸರ್ಕಾರದ ಪ್ರತಿಷ್ಠೆಗೆ ಜನಸಾಮಾನ್ಯರು ಬಲಿಯಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಮುಷ್ಕರದಲ್ಲಿ ಕಾಂಗ್ರೆಸ್ ಕೈವಾಡವಿದೆ ಎಂಬ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರ  ಹೇಳಿಕೆಯನ್ನು ಖಂಡಿಸಿರುವ ರಕ್ಷಾ ರಾಮಯ್ಯ, ಮಾತುಕತೆ ಮಾರ್ಗ ಬಿಟ್ಟು ನೌಕರರ ಮೇಲೆ ವರ್ಗಾವಣೆ, ಅಮಾನತು ಸೇವೆಯಿಂದ ವಜಾಗೊಳಿಸುವಂತಹ ಧಮನಕಾರಿ ಮತ್ತು ಸರ್ವಾಧಿಕಾರಿ ಕ್ರಮಗಳ ಮೂಲಕ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಮಾತುಕತೆ ನಡೆಸದ ಸರ್ಕಾರದ ಧೋರಣೆ ನೋಡಿದರೆ ಸಾರಿಗೆ ಸಂಸ್ಥೆಯನ್ನು ಖಾಸಗೀಕರಣ ಮಾಡುವ ಹುನ್ನಾರ ಇರುವುದು ಸ್ಪಷ್ಟವಾಗುತ್ತದೆ. ಜನಸಾಮಾನ್ಯರ ಹಿತದೃಷ್ಟಿಯಿಂದ ಪ್ರತಿಷ್ಠೆ ಬಿಟ್ಟು ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಎಂ.ಎಸ್. ರಕ್ಷಾ ರಾಮಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

SCROLL FOR NEXT