ರಾಜ್ಯ

ಕೊರೋನಾ ನಿಯಂತ್ರಣ: ಹೈಕೋರ್ಟ್'ಗೆ ಮಾಹಿತಿ ನೀಡಿದ ರಾಜ್ಯ ಸರ್ಕಾರ

Manjula VN

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರಿಗಾಗಿ ಹಾಸಿಗೆ, ಆ್ಯಂಬುಲೆನ್ಸ್, ಆ್ಯಕ್ಸಿಜನ್, ಔಷಧ ಕೊರತೆ ಇಲ್ಲ ಹಾಗೂ ರೆಮ್'ಡೆಸಿವರ್ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ ಎಂದು ಹೈಕೋರ್ಟ್'ಗೆ ರಾಜ್ಯ ಸರ್ಕಾರ ಶನಿವಾರ ಮಾಹಿತಿ ನೀಡಿದೆ. 

ಇದಕ್ಕೆ ಪ್ರತಿಕ್ರಿಯೆ ನೀಡಿದ ಹೈಕೋರ್ಟ್, ಚಿಕಿತ್ಸಾ ಮೂಲಸೌಕರ್ಯದಲ್ಲಿ ಯಾವುದೇ ಕೊರತೆ ಆಗಕೂಡದು ಎಂದು ಸರ್ಕಾರಕ್ಕೆ ಸೂಚನೆ ನೀಡಿದೆ. 

ಕೋವಿಡ್ ಪ್ರಕರಣಗಳ ನಿರ್ವಹಣೆಗೆ ಕೈಗೊಂಡಿರುವ ಮೂಲಸೌಕರ್ಯಗಳ ಸಿದ್ದತೆಗಳ ಬಗ್ಗೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ಪೀಠದ ಮುಂದೆ ಹಾಜರಾತ ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ, ರಾಜ್ಯದಲ್ಲಿ ಒಟ್ಟಾರೆ 35,821 ಡೋಸ್ ರೆಮ್'ಡೆಸಿವರ್ ಲಭ್ಯತೆ ಇದೆ. ಖಾಸಗಿ ಸ್ಟಾಕಿಸ್ಟ್ ಗಳ ಬಳಿ 15,000 ಡೋಸ್ ಲಭ್ಯವಿದೆ. 70 ಸಾವಿರ ರೆಮ್'ಡೆಸಿವರ್ ಪೂರೈಕೆಗೆ ಆದೇಶ ನೀಡಲಾಗಿದೆ. ರೆಮ್'ಡೆಸಿವರ್'ಗೆ ಪರ್ಯಾಯ ಔಷಧ ಲಭ್ಯವಿದೆ. ಖಾಸಗಿ ಆಸ್ಪತ್ರೆಗಳಿಗೆ ಪೂರೈಸಲು ನೋಡಲ್ ಅಧಿಕಾರಿ ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. 

ವಿಚಾರಣೆ ಬಳಿಕ ನ್ಯಾಯಾಲಯದ 24 ಗಂಟೆಗಳಲ್ಲಿ ಕೋವಿಡ್-19 ಆರ್'ಟಿ-ಪಿಸಿಆರ್ ವರದಿ ನೀಡಬೇಕು. ಯಾವೊಬ್ಬ ಸೋಂಕಿತರಿಗೂ ಹಾಸಿಗೆ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಸದ್ಯ ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚಾಗುತ್ತಿದ್ದು, 48 ಗಂಟೆ ಕಳೆದರೂ ವರದಿಗಳು ಜನರ ಕೈಸೇರುತ್ತಿಲ್ಲ. ಹಾಗಾಗಿ ಸರ್ಕಾರ 24 ಗಂಟೆಗಳೊಳಗೆ ವರದಿ ಲಭ್ಯವಾಗುವಂತೆ ಮಾಡಬೇಕು. 

ಸೋಂಕು ಪತ್ತೆ ಪರೀಕ್ಷೆ ವರದಿ ಬರುವವರೆಗೆ ಶಂಕಿತರು ಐಸೋಲೇಷನ್ ನಲ್ಲಿ ಇರುವಂತೆ ನೋಡಿಕೊಳ್ಳಬೇಕು. ಧಾರ್ಮಿಕ ಸಮಾರಂಭಗಳಿಗೆ ನಿಷೇಧ ಹೇರಲಾಗಿದೆ. ಆದರೆ, ರಾಜಕೀಯ ಸಭೆ ನಡೆಸಲು ಅವಕಾಶ ನೀಡಿರುವ ಬಗ್ಗೆ ಸರ್ಕಾರ ಮರುಪರಿಶೀಲಿಸಬೇಕು. ಉಪಚುನಾವಣೆ ಫಲಿತಾಂಶದ ದಿನ ಕೋವಿಡ್ ನಿಯಮ ಮೀರಬಾರದು ಎಂದಿತು. 

SCROLL FOR NEXT