ರಾಜ್ಯ

ಮುಖ್ಯಮಂತ್ರಿಗಳ ಅನುಪಸ್ಥಿತಿಯಲ್ಲಿ ತುರ್ತು ಸಭೆ: ಕೋವಿಡ್ ಬಗ್ಗೆ ಮಾಹಿತಿ ಪಡೆದ ರಾಜ್ಯಪಾಲ ವಜುಭಾಯಿ ವಾಲಾ 

Sumana Upadhyaya

ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿರುವುದರಿಂದ ರಾಜ್ಯದಲ್ಲಿ ಕೊರೋನಾ ಸ್ಥಿತಿಗತಿ ಬಗ್ಗೆ ಚರ್ಚಿಸಲು ರಾಜ್ಯಪಾಲ ವಜುಭಾಯಿ ವಾಲಾ ಅಧಿಕಾರಿಗಳ ತುರ್ತು ಸಭೆ ನಡೆಸಿದರು.

ಆಸ್ಪತ್ರೆಗಳಲ್ಲಿ ಬೆಡ್ ಗಳ ಲಭ್ಯತೆ, ಐಸಿಯು, ಔಷಧಿಗಳು ಮತ್ತು ಆಕ್ಸಿಜನ್ ಪೂರೈಕೆಯ ಬಗ್ಗೆ ಅಧಿಕಾರಿಗಳಿಂದ ರಾಜ್ಯಪಾಲರು ಮಾಹಿತಿ ಪಡೆದುಕೊಂಡರು.

ಮೊನ್ನೆ ಆರೋಗ್ಯ ಸಚಿವ ಡಾ ಕೆ ಸುಧಾಕರ್ ರಾಜ್ಯಪಾಲರನ್ನು ಭೇಟಿ ಮಾಡಿ ರಾಜ್ಯದಲ್ಲಿ ಕೊರೋನಾ ಸ್ಥಿತಿಗತಿ ಮತ್ತು ಅದಕ್ಕೆ ಸರ್ಕಾರ ಯಾವ ರೀತಿ ಸಿದ್ಧತೆ ಮಾಡಿಕೊಂಡಿದೆ, ವ್ಯವಸ್ಥೆ ಏನೇನು ಮಾಡಿದೆ ಎಂದು ವಿವರಿಸಿದ್ದರು. ಅದಾದ ಬಳಿಕ ನಿನ್ನೆಯೇ ರಾಜ್ಯಪಾಲರು ಅಧಿಕಾರಿಗಳನ್ನು ಕರೆದು ತುರ್ತು ಸಭೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ.

ರಾಜ್ಯಗಳಲ್ಲಿ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳ ಮಾರ್ಗದರ್ಶನದಲ್ಲಿ ಕೊರೋನಾ ವಿರುದ್ಧ ಹೋರಾಡಲು ಕ್ರಮ ಕೈಗೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. ನಿನ್ನೆ ರಾಜ್ಯಪಾಲರೊಂದಿಗೆ ನಡೆದ ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿ ಕುಮಾರ್, ಮುಖ್ಯಮಂತ್ರಿಗಳ ಹೆಚ್ಚುವರಿ ಕಾರ್ಯದರ್ಶಿ ಇ ವಿ ರಮಣ ರೆಡ್ಡಿ, ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಭಾಗವಹಿಸಿ ರಾಜ್ಯಪಾಲರಿಗೆ ಕೊರೋನಾ ಹಿನ್ನೆಲೆಯಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದ್ದಾರೆ ಎಂದು ತಿಳಿದುಬಂದಿದೆ.

ಕರ್ನಾಟಕದಲ್ಲಿ ಕೊರೋನಾ ನಿಯಂತ್ರಣಕ್ಕೆ ಸೂಕ್ತ ಅಗತ್ಯ ಕ್ರಮ ಕೈಗೊಳ್ಳಿ ಎಂದು ರಾಜ್ಯಪಾಲರು ಹೇಳಿದ್ದಾರೆ ಎಂದು ತಿಳಿದುಬಂದಿದೆ. ಆಸ್ಪತ್ರೆಗಳಲ್ಲಿ ಸಾಕಷ್ಟು ಆಕ್ಸಿಜನ್ ಪೂರೈಕೆ, ಔಷಧಿಗಳು ಮತ್ತು ಬೆಡ್ ಗಳ ವ್ಯವಸ್ಥೆಯನ್ನು ಮಾಡುವಂತೆ ಸೂಚಿಸಿದ್ದಾರೆ ಎಂದು ರಾಜಭವನ ಪ್ರಕಟಣೆ ತಿಳಿಸಿದೆ. 

SCROLL FOR NEXT