ರಾಜ್ಯ

ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಎಲ್ಲಾ ಅಗತ್ಯ ಮೂಲ ಸೌಕರ್ಯ ಕಲ್ಪಿಸಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

Manjula VN

ಬೆಂಗಳೂರು: ರಾಜ್ಯದಲ್ಲಿನ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಕಾಲಮಿತಿಯೊಳಗೆ ಶೌಚಾಲಯ ಹಾಗೂ ವಿದ್ಯುತ್ ಸೇರಿದಂತೆ ಇತರೆ ಎಲ್ಲಾ ಅಗತ್ಯ ಮೂಲ ಸೌಕರ್ಯ ಕಲ್ಪಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೋಮವಾರ ನಿರ್ದೇಶಿಸಿದೆ. 

33,164 ಅಂಗನವಾಡಿಗಳಿಗೆ ಮಾತ್ರ ವಿದ್ಯುತ್ ಸಂಪರ್ಕ, 26,560 ಅಂಗನವಾಡಿಗಳಿಗೆ ಫ್ಯಾನ್‌ಗಳನ್ನು ಪೂರೈಸಲಾಗಿದೆ. 44,225 ಕೇಂದ್ರಗಳಲ್ಲಿ ಶೌಚಾಲಯ ಇದೆ ಎಂದು ಸರ್ಕಾರ ಮೆಮೊ ಸಲ್ಲಿಸಿತ್ತು.

ಇದನ್ನು ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ‘ಈ ಅಂಕಿ–ಅಂಶಗಳು ಆಘಾತಕಾರಿ ಸ್ಥಿತಿಯನ್ನು ಚಿತ್ರಿಸುತ್ತವೆ’ ಎಂದು ಅಭಿಪ್ರಾಯಪಟ್ಟಿತು.

‘ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯ ಇರಬೇಕು. ಬಾಲಕರು, ಬಾಲಕಿಯರು ಮತ್ತು ಅಂಗವಿಕಲ ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಬೇಕು. ಈ ಶಿಫಾರಸನ್ನು ಸರ್ಕಾರ ಗಮನಿಸಬೇಕು’ ಎಂದು ಪೀಠ ಹೇಳಿತು.

‘ಕೊಳೆಗೇರಿಗಳಿಗೆ 100 ಮತ್ತು ನಗರ ಪ್ರದೇಶಕ್ಕೆ 350 ಅಂಗನವಾಡಿಗಳನ್ನು ಮಂಜೂರು ಮಾಡಲಾಗಿದೆ. ಹೆಚ್ಚುವರಿಯಾಗಿ ಇನ್ನೂ 4,244 ಅಂಗನವಾಡಿಗಳಿಗೆ ಬೇಡಿಕೆ ಇದೆ. ಸ್ವಚ್ಛ ಭಾರತ ಯೋಜನೆಯಡಿ 3,219 ಶೌಚಾಲಯಗಳನ್ನು ನಿರ್ಮಿಸಲಾಗಿದೆ’ ಎಂದು ಸರ್ಕಾರ ವಿವರಣೆ ಸಲ್ಲಿಸಿತು.

‘ಕೊಳೆಗೇರಿ ಮತ್ತು ಎಸ್‌ಸಿ/ಎಸ್‌ಟಿ ಜನಸಂಖ್ಯೆ ಹೆಚ್ಚಿರುವ ಅಂಗನವಾಡಿಗಳಲ್ಲಿ ಕುಡಿಯಲು ಶುದ್ಧ ಮತ್ತು ಬಿಸಿನೀರು ಪೂರೈಸಬೇಕು ಎಂಬ ಶಿಫಾರಸನ್ನು ಸರ್ಕಾರ ಪಾಲಿಸಿಲ್ಲ’ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.

ಬೆಂಗಳೂರು ನಗರದಲ್ಲಿ ಹೆಚ್ಚಿನ ಸಂಖ್ಯೆಯ ಅಂಗವಾಡಿಗಳನ್ನು ತೆರೆಯ ಬೇಕು. ನಿರ್ದಿಷ್ಠ ಕಾಲಮಿತಿಯೊಳಗೆ ರಾಜ್ಯದ ಎಲ್ಲಾ ಅಂಗನವಾಡಿಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು. ಈ ಎಲ್ಲಾ ನಿರ್ದೇಶನಗಳನ್ನು ಪಾಲಿಸಿರುವ ಸಂಬಂಧ ಅನುಸರಣಾ ಅಫಿಡವಿಟ್‌ ಸಲ್ಲಿಸುವಂತೆ ತಿಳಿಸಿದ ಪೀಠ, ವಿಚಾರಣೆಯನ್ನು ಜೂ.11ಕ್ಕೆ ಮುಂದೂಡಿತು.

SCROLL FOR NEXT