ರಾಜ್ಯ

ಲಾಕ್'ಡೌನ್ ಬೇಡವೇ ಬೇಡ ಎನ್ನುತ್ತಿರುವ ನಾಯಕರು: ಇಂದು ರಾಜ್ಯಪಾಲರಿಂದ ಸರ್ವಪಕ್ಷ ಸಭೆ, ಬಳಿಕ ಕಠಿಣ ಕ್ರಮ ಜಾರಿ ಸಾಧ್ಯತೆ

Manjula VN

ಬೆಂಗಳೂರು: ಬೆಂಗಳೂರಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಸರ್ಕಾರ ಸೋಮವಾರ ಬೆಂಗಳೂರು ನಗರ ಶಾಸಕರ ಅಭಿಪ್ರಾಯ ಸಂಗ್ರಹಿಸಿದ್ದು, ಈ ವೇಳೆ ಹಲವು ನಾಯಕರು ಲಾಕ್ಡೌನ್ ಬೇಡವೇ ಬೇಡ ಎಂದು ಹೇಳಿದ್ದಾರೆ. ಇದರಂತೆ ಇಂದು ರಾಜ್ಯಪಾಲರ ವಿ.ಆರ್.ವಾಲಾ ಅಧ್ಯಕ್ಷತೆಯಲ್ಲಿ ಸರ್ವಪಕ್ಷಗಳ ನಾಯಕರ ಸಭೆ ನಡೆಯಲಿದ್ದು, ಅಂತಿಮವಾಗಿ ಬೆಂಗಳೂರು ಹಾಗೂ ರಾಜ್ಯದಾದ್ಯಂತ ಕೈಗೊಳ್ಳುವ ಕಠಿಣ ಕ್ರಮಗಳ ಬಗ್ಗೆ ಆದೇಶ ಹೊರ ಬೀಳಲಿದೆ. 

ನಿನ್ನೆಯಷ್ಟೇ ಕಂದಾಯ ಸಚಿವ ಅಶೋಕ್ ನಡೆಸಿದ ಸಭೆಯಲ್ಲಿ ಶಾಸಕರು, ಸಂಸದರು, ರಾಜಧಾನಿಯಲ್ಲಿ ಕೊರೋನಾ ನಿಯಂತ್ರಣಕ್ಕೆ ಏನು ಮಾಡಬೇಕು ಎಂಬ ಬಗ್ಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. 

ಆಸ್ಪತ್ರೆಯಿಂದಲೇ ವಿಡಿಯೋ ಸಂವಾದದ ಮೂಲಕ ಸಭೆಯಲ್ಲಿ ಯಡಿಯೂರಪ್ಪ ಅವರು ಭಾಗವಿಸಿದ್ದರು. ಈ ವೇಳೆ ಎಲ್ಲಾ ನಾಯಕರ ಸಲಹೆಗಳನ್ನೂ ಸ್ವೀಕರಿಸಿದರು. 

ಈ ವೇಳೆ ಕಾಂಗ್ರೆಸ್ ಪಕ್ಷದ ಸದಸ್ಯರು ಕೊರೋನಾ ನಿಯಂತ್ರಣಕ್ಕಾಗಿ 144 ಸೆಕ್ಷನ್ ವಿಧಿಸಬೇಕು. 4ಕ್ಕಿಂತ ಹೆಚ್ಚು ಜನ ಸೇರದಂತೆ ಕ್ರಮ ಕೈಗೊಳ್ಳಬೇಕು. ಆದರೆ, ಯಾವುದೇ ಕಾರಣಕ್ಕೂ ಲಾಕ್ಡೌನ್ ಮಾಡಬಾರದು. ಒಂದು ವೇಳೆ ಲಾಕ್ಡೌನ್ ಮಾಡಿದರೆ, ಪ್ರತಿ ಕುಟುಂಬಕ್ಕೆ ರೂ.25 ಸಾವಿರ ಹಣ ನೀಡಬೇಕೆಂದು ಒತ್ತಾಯಿಸಿದರು. 

ಸಭೆ ಬಳಿಕ ಮಾತನಾಡಿದ ಕಂದಾಯ ಸಚಿವ ಅಶೋಕ್ ಅವರು, ರಾಜ್ಯಪಾಲ ವಿ.ಆರ್.ವಾಲಾ ಅಧ್ಯಕ್ಷತೆಯಲ್ಲಿ ಸರ್ವಪಕ್ಷಗಳ ಸಭೆ ಮಂಗಳವಾರ ನಡೆಯಲಿದೆ. ಈ ವೇಳೆ ಬೆಂಗಳೂರು ಜನಪ್ರತಿನಿಧಿಗಳ ಸಭೆಯ ಅಭಿಪ್ರಾಯ, ಕೊರೋನಾ ತಾಂತ್ರಿಕ ಸಲಹಾ ಸಮಿತಿಯ ತಜ್ಞರ ಅಭಿಪ್ರಾಯವನ್ನು ಮುಂದಿಟ್ಟುಕೊಂಡು ಚರ್ಚೆ ನಡೆಯಲಿದೆ. ಅಂತಿಮವಾಗಿ ಯಾವ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧರಿಸುತ್ತಾರೆ. ಮಂಗಳವಾರ ಸಂಜೆ ಈ ಬಗ್ಗೆ ಸ್ಪಷ್ಟ ಮಾರ್ಗಸೂಚಿಗಳನ್ನು ಪ್ರಕಟಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. 

ಸಭೆಯಲ್ಲಿ ಸಚಿವ ಆರ್.ಅಶೋಕ್, ಕಾಂಗ್ರೆಸ್ ಸೇರಿದಂತೆ ಎಲ್ಲಾ ಶಾಸಕರೂ ಲಾಕ್ಡೌನ್ ಬೇಡ ಎಂಬ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವೀಕೆಂಡ್ ಲಾಕ್ಡೌನ್ ಬಗ್ಗೆ ಪ್ರಸ್ತಾಪವಾಗಿಲ್ಲ, ಕಾಂಗ್ರೆಸ್ ಶಾಸಕರು ರಾಜ್ಯದಾದ್ಯಂತ 144 ಸೆಕ್ಷನ್ ವಿಧಿಸಬೇಕು, ಈ ಮೂಲಕ 4ಕ್ಕಿಂತ ಹೆಚ್ಚು ಜನ ಸೇರಿದಂತೆ ನಿಯಂತ್ರಿಸಬೇಕು. ಇದರಿಂದ ಜನರ ನಿತ್ಯ ಜೀವನದ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ ಎಂಬು ಸಲಹೆ ನೀಡಿದ್ದಾರೆ. ಇವೆಲ್ಲವನ್ನೂ ಮುಖ್ಯಮಂತ್ರಿಗಳು ಆಲಿಸಿದ್ದು, ಮಂಗಳವಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆಂದು ತಿಳಿಸಿದ್ದಾರೆ. 

SCROLL FOR NEXT