ರಾಜ್ಯ

ಕೋವಿಡ್ ಕೇರ್ ಕೇಂದ್ರಗಳಲ್ಲಿ ಹಾಸಿಗೆಗಳ ಸಂಖ್ಯೆ ಮತ್ತಷ್ಟು ಹೆಚ್ಚಳ: ಬಿಬಿಎಂಪಿ

Manjula VN

ಬೆಂಗಳೂರು: ನಗರದಲ್ಲಿ ಕೊರೋನಾ ಸೋಂಕು ಪ್ರಕರಣ ಹೆಚ್ಚಾಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೇ ಸಮಸ್ಯೆಗಳು ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಕೇರ್ ಕೇಂದ್ರಗಳಲ್ಲಿ ಹಾಸಿಗೆಗಳ ಸಂಖ್ಯೆ ಹೆಚ್ಚಿಸಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಂಕು ಹೆಚ್ಚಳವಾಗುತ್ತಿರುವುದರಿಂದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿಯೇ ನಾವು ಖಾಸಗಿ ಆಸ್ಪತ್ರೆಗಳು ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಲುವಾಗಿ ಶೇ.50ರಷ್ಟು ಹಾಸಿಗೆ ಮೀಸಲಿಡುವಂತೆ ಸೂಚಿಸಿದ್ದೆವು. ಈಗಾಗಲೇ ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ಗಳನ್ನು ನೀಡಲಾಗಿದ್ದು, ಸೋಂಕಿತರಿಗೆ ಶೇ.50ರಷ್ಟು ಹಾಸಿಗೆ ಮೀಸಲಿಡಲೇ ಹೋದಲ್ಲಿ, ಆ ಆಸ್ಪತ್ರೆಗಳ ಒಪಿಡಿ (ಹೊರರೋಗಿಗಳ ವಿಭಾಗ)ಗಳನ್ನು ಬಂದ್ ಮಾಡಲಾಗುತ್ತದೆ ಎಂದು ಎಚ್ಚರಿಸಲಾಗಿದೆ ಎಂದು ಹೇಳಿದ್ದಾರೆ. 

ಸೋಂಕಿತರಿಗೆ ಸರಿಯಾಗಿ ಹಾಸಿಗೆ ಸಿಗದಿರುವುದು ಗಂಭೀರವಾಗಿದ್ದು, ಹೀಗಾಗಿ ಪ್ರತಿ ಸರ್ಕಾರಿ ಆಸ್ಪತ್ರೆಗೂ ನೋಡೆಲ್ ಅಧಿಕಾರಿಯನ್ನು ನೇಮಿಸಲಾಗಿದೆ. ಜೊತೆಗೆ ಮಂಗಳವಾರದಿಂದ ಕೋವಿಡ್ ಕೇರ್ ಕೇಂದ್ರಗಳಲ್ಲಿ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಳ ಮಾಡಲಾಗುತ್ತದೆ. ಸೋಂಕಿನ ಪ್ರಮಾಣ ಕಡಿಮೆ ಇರುವ ರೋಗಿಗಳನ್ನು ಇಲ್ಲಿಗೆ ದಾಖಲು ಮಾಡಲಾಗುತ್ತದೆ. ಇದರಿಂದ ಸೋಂಕು ತೀವ್ರತೆ ಇದ್ದವರಿಗೆ ಆಸ್ಪತ್ರೆಯಲ್ಲಿ ಐಸಿಯು ಹಾಸಿಗೆ ಲಭ್ಯವಾಗಲಿದೆ ಎಂದು ಹೇಳಿದ್ದಾರೆ. 

ಇದೇ ವೇಳೆ ಆಕ್ಸಿಜನ್ ಕೊರತೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕೊರತೆಯಿರುವ ಆಕ್ಸಿಜನ್ ಸಮಸ್ಯೆ ನಿವಾರಣೆಗೆ ಕಂಪನಿಗಳಿಂದ ದೊಡ್ಡ ಪ್ರಮಾಣದಲ್ಲಿ ಆಕ್ಸಿಜನ್ ಗಳನ್ನು ಪಡೆಯುವ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಈ ಕುರಿತು ಸರ್ಕಾರದ ಮಟ್ಟದಲ್ಲಿ ಎರಡು ಬಾರಿ ಚರ್ಚೆ ನಡೆಸಲಾಗಿದೆ. ಸಮಿತಿಯೊಂದನ್ನು ರಚನೆ ಮಾಡಲಾಗಿದೆ.. ಮೊದಲಿಗಿಂತ ಆಕ್ಸಿಜನ್ ಬೇಡಿಕೆ 5 ಪಟ್ಟು ಹೆಚ್ಚಾಗಿದೆ. 1 ಪಟ್ಟು ಬೇಡಿಕೆ ಹೆಚ್ಚಿದರೆ ಪೂರೈಕೆ ಮಾಡಬಹುದಿತ್ತು. ಆದರೆ, 5 ಪಟ್ಟು ಬೇಡಿಕೆ ಪೂರೈಕೆ ಮಾಡುವುದು ಸವಾಲಾಗಿದೆ ಎಂದು ತಿಳಿಸಿದ್ದಾರೆ. 

ಕಳೆದ ಬಾರಿ ಮೂರ್ನಾಲ್ಕು ದಿನಕ್ಕೆ ಆಕ್ಸಿಜನ್ ಸರಬರಾಜು ಆಗುತ್ತಿದ್ದದ್ದು, ಇದೀಗ ದಿನಕ್ಕೆ 2-3 ಬಾರಿ ವಿತರಣೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹೆಚ್ಚಾದ ಬೇಡಿಕೆಯಿಂದ ಸಮಸ್ಯೆ ಉದ್ಭವವಾಗಿದ್ದು, ನಿವಾರಣೆ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ. 

ಪ್ರಸ್ತುತ ಪಾಲಿಕೆ ವ್ಯಾಪ್ತಿಗೆ 300 ಟನ್ ಅಕ್ಸಿಜನ್ ಲಭ್ಯತೆ ಇದೆ. ಆದರೆ, ಸರಬರಾಜಿನ ಸಮಸ್ಯೆಯಿದೆ. ಆದ್ದರಿಂದ ಆಕ್ಸಿಜನ್ ತಯಾರಿಕೆ ಮಾತ್ರವಲ್ಲ, ವಿತರಣೆಯಲ್ಲೂ ಕೆಲವು ಸಮಸ್ಯೆಗಳು ಇದ್ದು ನಿವಾರಿಸಲು ಬೇಕಾದ ಮಾರ್ಗಸೂಚಿಗಳನ್ನು ನೀಡಲಾಗಿದೆ. ಈ ಹಿಂದಿಗಿಂತ ತುರ್ತು ಚಿಕಿತ್ಸಾ ವ್ಯವಸ್ಥೆಯೂ ಸುಧಾರಿಸಿದೆ. ಯಾವುದೇ ಕಾರಣಕ್ಕೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಹಾಸಿಗೆ ಮತ್ತು ವೆಂಟಿಲೇಟರ್ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲು ಈಗಾಗಲೇ ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಿದ್ದು, ಪ್ರತಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಲಿದ್ದಾರೆಂದು ಮಾಹಿತಿ ನೀಡಿದ್ದಾರೆ.

SCROLL FOR NEXT