ರಾಜ್ಯ

ಹಾಸಿಗೆ ಕೊರತೆ ಸಮಸ್ಯೆ ಕುರಿತು ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುತ್ತಿದೆ: ಬಿಬಿಎಂಪಿ

Manjula VN

ಬೆಂಗಳೂರು: ನಗರದಲ್ಲಿ ಸಾಮಾನ್ಯ ಹಾಸಿಗೆಗಳ ಕೊರತೆಯಿಲ್ಲ, ಐಸಿಯು ಹಾಸಿಗೆಗಳ ಕೊರತೆಯಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಬುಧವಾರ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಪಾಸಿಟಿವ್ ಬಂದ ಕೂಡಲೇ ಆಸ್ಪತ್ರೆಗೆ ಹೋಗುವ ಅಗತ್ಯವಿಲ್ಲ. ಶೇ.80ರಷ್ಟು ಜನರು ಮನೆಯಲ್ಲಿಯೇ ಇದ್ದು ವಾಸಿ ಮಾಡಿಕೊಳ್ಳಬಹುದು. ನಗರದಲ್ಲಿ ಸಾಮಾನ್ಯ ಹಾಸಿಗೆಗಳ ಕೊರತೆಯಿಲ್ಲ. ಆದರೆ, ಐಸಿಯು ಹಾಸಿಗೆಗಳ ಕೊರತೆಯಿದೆ. ಸಹಾಯವಾಣಿ ಮೂಲಕ ಹಾಸಿಗೆ ಅಲಾಟ್ ಮಾಡಿಕೊಂಡು ಹೋದರೆ ಯಾವುದೇ ಸಮಸ್ಯೆಗಳಿಲ್ಲ. ಹಾಸಿಗೆ ಕೊರತೆ ಕುರಿತು ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. 

ಇತ್ತೀಚಿನ ದಿನಗಳಲ್ಲಿ ಕೊರೋನಾ ಪಾಸಿಟಿವ್ ಬಂದ ಕೂಡಲೇ ಆಸ್ಪತ್ರೆಗೆ ದಾಖಗಬೇಕು ಎನ್ನುವವರ ಸಂಖ್ಯೆ ಹೆಚ್ಚಾಗುತ್ತಿದೆ. ಜನರು ಮನೆಯಲ್ಲಿಯೇ ಇದ್ದು ವಾಸಿ ಮಾಡಿಕೊಳ್ಳಬಹುದು. ಇದರಿಂದ ಐಎಲ್ಐ, ಸಾರಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಐಸಿಯುವಿನಲ್ಲಿ ಹಾಸಿಗೆ ಒದಗಿಸಲು ಸಹಕಾರಿಯಾಗುತ್ತದೆ. ಸಮಸ್ಯೆಯನ್ನು ಅರಿತು ಜನರು ಸಹಕರಿಸಬೇಕು ಎಂದು ತಿಳಿಸಿದ್ದಾರೆ. 

ಸೋಂಕು ಹೆಚ್ಚಳ ಆಗುತ್ತಿರುವುದರಿಂದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿಯೇ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಲುವಾಗಿ ಶೇ.50ರಷ್ಟು ಹಾಸಿಗೆ ಮೀಸಲಿಡುವುಂತೆ ಈಗಾಗಲೇ ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಸೋಂಕಿತರಿಗೆ ಶೇ.50ರಷ್ಟು ಹಾಸಿಗೆ ಮೀಸಲಿಡದೆ ಹೋದಲ್ಲಿ, ಆ ಆಸ್ಪತ್ರೆಗಳ ಹೊರರೋಗಿಗಳ ವಿಭಾಗ ಬಂದ್ ಮಾಡುವುದಾಗಿಯೂ ಎಚ್ಚರಿಕೆ ನೀಡಿದ್ದೇವೆ. 

ಸುವರ್ಣ ಸುರಕ್ಷಾ ವತಿಯಿಂದ 7 ಸಾವಿರ ಹಾಸಿಗೆ ಪಡೆಯಲಾಗಿದೆ. 2-3 ದಿನಗಳಲ್ಲಿ 7 ಸಾವಿರ ಇರುವ ಹಾಸಿಗೆಯನ್ನು 10-11 ಸಾವಿರಕ್ಕೆ ಹೆಚ್ಚಿಸುವುದಾಗಿ ಭರವಸೆ ನೀಡಿದ್ದಾರೆ. ಪಾಲಿಕೆಯ 8 ವಲಯಗಳಲ್ಲಿ ವಿಕೇಂದ್ರೀಕೃತ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಅಗತ್ಯ  ಇದ್ದವರು ಸಹಾಯವಾಣಿ ಮೂಲಕ ಹಾಸಿಗೆ ನಿಗದಿಪಡಿಸಿಕೊಂಡು ಆಸ್ಪತ್ರೆಗಳಲ್ಲಿ ದಾಖಲು ಆಗಬಹುದು ಎಂದಿದ್ದಾರೆ. 

SCROLL FOR NEXT