ರಾಜ್ಯ

ರೆಮ್ಡೆಸಿವಿರ್, ಆಮ್ಲಜನಕ ವಿತರಣೆಗೆ ಯಾಂತ್ರಿಕ ವ್ಯವಸ್ಥೆ ರಚಿಸಿ: ರಾಜ್ಯ ಸರ್ಕಾರಕ್ಕೆ 'ಹೈ' ಸೂಚನೆ 

Manjula VN

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರು ಹಾಸಿಗೆ, ರೆಮ್ಡೆಸಿವಿರ್ ಔಷಧ ಮತ್ತು ಆ್ಯಕ್ಸಿಜನ್ ಗಾಗಿ ಅಲೆಯುವುದನ್ನು ತಪ್ಪಿಸಿ ಅವುಗಳ ಲಭ್ಯತೆ ಹಾಗೂ ಪೂರೈಕೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಸರ್ಕಾರಕ್ಕೆ ಗುರುವಾರ ನಿರ್ದೇಶಿಸಿದೆ. 

ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸುಮಾರು ಒಂದೂವರೆ ಗಂಟೆ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರ ನೇತೃತ್ವದ ವಿಭಾಗೀಯ ಪೀಠ, ಕೋವಿಡ್ ನಿಯಂತ್ರಣ, ಸೋಂಕಿತರು ಎದುರಿಸುತ್ತಿರುವ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಹಲವು ನಿರ್ದೇಶನಗಳನ್ನು ನೀಡಿತು. 

ಸಾರ್ವಜನಿಕರು ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಹಾಸಿಗೆ ವ್ಯವಸ್ಥೆ ಮಾಡಲು ಎಲ್ಲಾ ಆಸ್ಪತ್ರೆಗಳ ಮುಂಭಾಗದಲ್ಲಿ ಹೆಲ್ಪ್ ಡೆಸ್ಕ್ ಸ್ಥಾಪಿಸಿ ಯಾವ ಆಸ್ಪತ್ರೆಗಳಲ್ಲಿ ಹಾಸಿಗೆ ಖಾಲಿ ಇದೆ ಎಂಬ ಕುರಿತು ಮಾಹಿತಿ ನೀಡಬೇಕೆಂದು ನಿರ್ದೇಶಿಸಿದೆ. 

ಅಲ್ಲದೆ, ಕಾಳಸಂತೆಯಲ್ಲಿ ರೆಮ್‌ಡಿಸಿವಿರ್ ಮಾರಾಟ ಮತ್ತು ಪೂರೈಕೆ ಕೊರತೆ ಮೇಲ್ವಿಚಾರಣೆ ಮಾಡಲು ಔಷಧ ಸಗಟು ವ್ಯಾಪಾರ ಸ್ಥಳಗಳಿಗೆ ಆಗಾಗ ಭೇಟಿ ನೀಡಿ ಪರಿಶೀಲನೆ ನಡೆಸಲು ಅಧಿಕಾರಿಗಳು ಮತ್ತು ಎನ್‌ಜಿಒಗಳನ್ನು ಒಳಗೊಂಡ ಸಮಿತಿ ನೇಮಿಸುವಂತೆ ಸರ್ಕಾರಕ್ಕೆ ಪೀಠ ನಿರ್ದೇಶನ ನೀಡಿತು.

‘ಔಷಧ ಅಂಗಡಿಗಳಲ್ಲಿ ರೆಮ್‌ಡಿಸಿವಿರ್ ಔಷಧ ಎಷ್ಟಿದೆ ಎಂಬುದನ್ನು ಪ್ರತಿ 12 ಗಂಟೆಗೊಮ್ಮೆ ಪ್ರಚಾರ ನೀಡಬೇಕು. ಈ ಔಷಧಿ ದೊರೆಯುವ ಅಂಗಡಿಗಳ ವಿಳಾಸ, ಸಂಪರ್ಕ ಸಂಖ್ಯೆಯನ್ನೂ ಒದಗಿಸಬೇಕು’ ಎಂದು ಪೀಠ ತಿಳಿಸಿತು.

‘ಕೋವಿಡ್ ಹೊರತಾದ ರೋಗಿಗಳು ಆಸ್ಪತ್ರೆಗೆ ದಾಖಲಾಗಲು ಆರ್‌ಟಿಪಿಸಿಆರ್‌ ನೆಗೆಟಿವ್ ವರದಿ ಕೇಳಲಾಗುತ್ತಿದೆ. ಆದ್ದರಿಂದ ಗರ್ಭಿಣಿ ಸ್ತ್ರೀಯರು, ಹಿರಿಯ ನಾಗರಿಕರು ವರದಿ ಪಡೆಯಲು ಪ್ರಯೋಗಾಲಯಗಳ ಮುಂದೆ ಸಾಲುಗಟ್ಟಿ ನಿಲ್ಲುವಂತಾಗಿದೆ. ಕೋವಿಡ್ ಲಕ್ಷಣ ಇಲ್ಲದವರು ಬೇರೆ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಲು ಆರ್‌ಟಿಪಿಸಿಆರ್‌ ನೆಗೆಟಿವ್ ವರದಿ ನೀಡಲು ಒತ್ತಾಯಿಸದಂತೆ ನೀತಿ ರೂಪಿಸಬೇಕು’ ಎಂದು ಪೀಠ ನಿರ್ದೇಶನ ನೀಡಿತು.

‘ತಾಂತ್ರಿಕ ಸಲಹಾ ಸಮಿತಿ ಮತ್ತು ತಜ್ಞರ ಪ್ರಕಾರ ಮೇ ಮೊದಲ ಮತ್ತು ಎರಡನೇ ವಾರದಲ್ಲಿ ಕೋವಿಡ್ ಎರಡನೇ ಅಲೆ ಉತ್ತುಂಗಕ್ಕೆ ಏರುವ ಸಾಧ್ಯತೆ ಇದೆ. ಹಾಸಿಗೆ, ಆಮ್ಲಜನಕ ಲಭ್ಯತೆಯ ಬಗ್ಗೆ ಮೌಲ್ಯಮಾಪನ ಅಗತ್ಯವಿದೆ’ ಎಂದು ಅರ್ಜಿದಾರ ಸಂಸ್ಥೆ ಎಐಸಿಸಿಟಿಯು ಹೇಳಿತು.

‘ಎಐಸಿಸಿಟಿಯು ನೀಡಿರುವ ಅಂಕಿ–ಅಂಶ ಸರಿಯಾಗಿದ್ದರೆ, ಪರಿಸ್ಥಿತಿ ಆತಂಕಕಾರಿಯಾಗಿದೆ. ಇದರ ಆಧಾರದಲ್ಲಿ ಅಡ್ವೊಕೇಟ್‌ ಜನರಲ್ ಅವರು ಶುಕ್ರವಾರ ವರದಿ ಸಲ್ಲಿಸಬೇಕು’ ಎಂದು ಪೀಠ ತಿಳಿಸಿತು.

SCROLL FOR NEXT