ರಾಜ್ಯ

ಕೊರೋನಾ ಮಾರ್ಗಸೂಚಿ ಎಫೆಕ್ಟ್: ಕಾರವಾರದಲ್ಲಿ ಮದುವೆಗೆ ಹೋದ ಅತಿಥಿಗಳು ಊಟ ಮಾಡದೆ ವಾಪಸ್!

Sumana Upadhyaya

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಶೇಜವಾಡದ ಸದಾನಂದ ಪ್ಯಾಲೇಜ್ ಕಲ್ಯಾಣ ಮಂಟಪಕ್ಕೆ ಮದುವೆಗೆ ಆಗಮಿಸಿದ್ದ ಅತಿಥಿಗಳನ್ನು ಪೊಲೀಸರು ವಾಪಸ್ ಮನೆಗೆ ಕಳುಹಿಸಿದ ಘಟನೆ ನಡೆದಿದೆ.

ಕೋವಿಡ್ ಮಾರ್ಗಸೂಚಿಯಂತೆ ಕಲ್ಯಾಣ ಮಂಟಪದಲ್ಲಿ ಮದುವೆ ದಿನ ಮಾಸ್ಕ್ ಧರಿಸಿ ಬಹುತೇಕರು ಸ್ಯಾನಿಟೈಸರ್ ಬಳಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಮನೆಯವರು ಮದುವೆ ಕಾರ್ಯಕ್ರಮ ನಡೆಸುತ್ತಿದ್ದರು. ಮಾಂಗಲ್ಯ ಧಾರಣೆ ಆಗಿ ಆರತಕ್ಷತೆ ನಡೆಯುತ್ತಿತ್ತು, ಆರತಕ್ಷತೆಗೆ ಸಾಕಷ್ಟು ಅತಿಥಿಗಳು ಬಂದಿದ್ದರು.

ಸರ್ಕಾರದ ಹೊಸ ಮಾರ್ಗಸೂಚಿ ಪ್ರಕಾರ 50 ಮಂದಿ ಮಾತ್ರ ಮದುವೆ ಕಾರ್ಯಕ್ರಮದಲ್ಲಿ ಸೇರಬೇಕು. ಅದಕ್ಕಿಂತ ಹೆಚ್ಚು ಜನರು ಇದ್ದ ಕಾರಣ ಕಲ್ಯಾಣ ಮಂಟಪದೊಳಗೆ ಪ್ರವೇಶಿಸಿದ ಪೊಲೀಸರು ಮತ್ತು ಅಧಿಕಾರಿಗಳು ಅತಿಥಿಗಳನ್ನು ಹೊರಗೆ ಕಳುಹಿಸಿದರು. ಕಕ್ಕಾಬಿಕ್ಕಿಯಾದ ಅತಿಥಿಗಳಲ್ಲಿ ಕೆಲವರು ಉಡುಗೊರೆ ನೀಡದೆ, ಊಟವನ್ನೂ ಮಾಡದೆ ಭಯದಿಂದ ಸಭಾಂಗಣದ ಹೊರಗೆ ಹೋದ ಪ್ರಸಂಗ ನಡೆಯಿತು.

ಸರ್ಕಾರದ ಮಾರ್ಗಸೂಚಿಗೂ ಮೊದಲೇ ಮದುವೆ ಆಮಂತ್ರಣ ಪತ್ರಿಕೆ ಹಂಚಿದ ಕಾರಣ ಅತಿಥಿಗಳು ಬಂದಿದ್ದಾರೆ. ಉಳಿದ ಕೋವಿಡ್ ಶಿಷ್ಟಾಚಾರಗಳನ್ನು ಪಾಲಿಸುತ್ತಿದ್ದೇವೆ ಎಂದು ಮದುವೆ ಮನೆಯವರು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದರಿಂದ ಸ್ವಲ್ಪ ಹೊತ್ತಿನ ನಂತರ ಸಾಮಾಜಿಕ ಅಂತರ ಕಾಯ್ದುಕೊಂಡು ಉಡುಗೊರೆ ನೀಡಿ ಊಟ ಮಾಡಿ ಹೋಗಲು ಅವಕಾಶ ನೀಡಿದರು. ಆದರೆ ಕೆಲವರಿಗೆ ಮದುವೆ ಊಟ ಮಿಸ್ಸಾಗಿದ್ದಂತೂ ಹೌದು.

SCROLL FOR NEXT