ರಾಜ್ಯ

ರಾಜ್ಯದಲ್ಲಿ ಕೊರೋನಾ ಸೋಂಕಿತರ ಹೆಚ್ಚಳ: ಹಾಸಿಗೆ ಲಭ್ಯತೆ ಕುರಿತು ಹೈಕೋರ್ಟ್ ಆತಂಕ

Manjula VN

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಆರ್ಭಟಿಸುತ್ತಿದ್ದು, ಈ ನಡುವಲ್ಲೇ ಲಭ್ಯವಿರುವ ಹಾಸಿಗೆಗಳ ವಿವರವನ್ನು ಗಮನಿಸಿದ ಹೈಕೋರ್ಟ್ ಆತಂಕ ವ್ಯಕ್ತಪಡಿಸಿದೆ. 

ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಹಾಗೂ ನ್ಯಾಯಮೂರ್ತಿ ಅರವಿಂದ್ ಕುಮಾರ್ ನೇತೃತ್ವದ ನ್ಯಾಯಪೀಠ, ಕೋವಿಡ್ ಕೇರ್ ಕೇಂದ್ರಗಳಲ್ಲಿ ಹೆಚ್ಚುವರಿ ಹಾಸಿಗೆಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳುವಂತೆ ಬಿಬಿಎಂಬಿ ಹಾಗೂ ಸರ್ಕಾರಕ್ಕೆ ಸೂಚನೆ ನೀಡಿದೆ. 

ಅಲ್ಲದೆ, ಆರೋಗ್ಯಾಧಿಕಾರಿಗಳು ಸಲ್ಲಿಸಿದ ಬೆಡ್ ವಿವರ ಗಮನಿಸಿದ ನ್ಯಾಯಪೀಠ, ವೆಂಟಿಲೇಟರ್ ಸಹಿತ ಐಸಿಯು ಬೆಡ್‍ಗಳ ಲಭ್ಯತೆ ಕೇವಲ 11 ಇವೆ. ಹೈ ಡಿಪೆಂಡೆನ್ಸಿ ಯೂನಿಟ್ (ಎಚ್‍ಡಿಯು) ಬೆಡ್‍ಗಳ ಸಂಖ್ಯೆ 32 ಇವೆ. ಬೆಂಗಳೂರಿನಲ್ಲಿ ನಿತ್ಯವೂ 20 ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಆದರೆ, ಬೆಡ್‍ಗಳ ಲಭ್ಯತೆ ಗಮನಿಸಿದರೆ ಆಂತಕವಾಗುತ್ತದೆ ಎಂದು ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿತು.

ಅಲ್ಲದೇ, ಬಿಬಿಎಂಪಿ ಹಾಗೂ ಸರಕಾರ ಬೆಡ್‍ಗಳ ಸಂಖ್ಯೆ ಹೆಚ್ಚಿಸಲು ತಕ್ಷಣವೇ ಕ್ರಮ ಕೈಗೊಳ್ಳಬೇಕು. ಬೆಂಗಳೂರಿಗೆ ಹತ್ತಿರವಿರುವ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹೆಚ್ಚುವರಿ ಬೆಡ್ ಗಳನ್ನು ಗುರುತಿಸಬೇಕು. ಐಸಿಯು, ಎಚ್‍ಡಿಯು ಹಾಗೂ ಜೆನರಲ್ ಬೆಡ್ ನಂತಹ 3 ರೀತಿಯ ಬೆಡ್‍ಗಳ ಸಂಖ್ಯೆಯನ್ನು ಹೆಚ್ಚಿಸಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶಿಸಿತು.

ಅಲ್ಲದೆ, ಹತ್ತಿರದ ಜಿಲ್ಲಾಸ್ಪತ್ರೆಗಳ, ಸೇನಾ ಆಸ್ಪತ್ರೆಗಳ, ನರ್ಸಿಂಗ್ ಕಾಲೇಜುಗಳ ಹಾಗೂ ರೆಡ್ ಕ್ರಾಸ್ ಸಂಸ್ಥೆಗಳ ಆಸ್ಪತ್ರೆಗಳ ಖಾಲಿ ಬೆಡ್‍ಗಳನ್ನು ಬಳಸಿಕೊಳ್ಳಲು ಮತ್ತು ಚಿಕಿತ್ಸೆಗೆ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಹಾಗೂ ನರ್ಸಿಂಗ್ ವಿದ್ಯಾರ್ಥಿಗಳ ನೆರವು ಕೋರಬಹುದು ಎಂದು ಸಲಹೆ ನೀಡಿತು. ಮುಂದಿನ ವಿಚಾರಣೆ ವೇಳೆ ಈ ನಿರ್ದೇಶನಗಳ ಅನುಪಾಲನಾ ವರದಿ ಸಲ್ಲಿಸಬೇಕು. ರೆಮ್‍ಡೆಸಿವಿರ್, ಆಕ್ಸಿಜನ್ ಬೇಡಿಕೆ ಹಾಗೂ ಪೂರೈಕೆ ಬಗ್ಗೆ ಹಾಗೂ ಎಷ್ಟು ಹೆಚ್ಚುವರಿ ಬೆಡ್‍ಗಳ ವ್ಯವಸ್ಥೆ ಮಾಡಲಾಗಿದೆ ಎಂಬ ಬಗ್ಗೆ ನಿಖರ ಮಾಹಿತಿ ನೀಡಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಎ.27ಕ್ಕೆ ಮುಂದೂಡಿತು.

SCROLL FOR NEXT