ರಾಜ್ಯ

ವೀಕೆಂಡ್ ಕರ್ಫ್ಯೂ ಇದ್ದರೂ ಕೆಎಸ್ಆರ್'ಟಿಸಿ ಬಸ್ ಸಂಚಾರ ಲಭ್ಯ: ಬೇಡಿಕೆಗೆ ಅನುಗುಣವಾಗಿ ಬಸ್ ವ್ಯವಸ್ಥೆ!

Manjula VN

ಬೆಂಗಳೂರು: ಕೊರೋನಾ 2ನೇ ಅಲೆಯ ಅಬ್ಬರಕ್ಕೆ ರಾಜ್ಯಾದ್ಯಂತ ವಾರಾಂತ್ಯ ಸಂಪೂರ್ಣ ಕರ್ಪ್ಯೂ ಜಾರಿಗೊಳಿಸಲಾಗಿದೆ, ಇದರ ಮಧ್ಯೆಯೂ ಸಾರಿಗೆ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಬೇಡಿಕೆಗೆ ಅನುಗುಣವಾಗಿ ಬಸ್ ವ್ಯವಸ್ಥೆ ಮಾಡುವುದಾಗಿ ಸರ್ಕಾರ ಮಾಹಿತಿ ನೀಡಿದೆ. 

ಈ ಕುರಿತಂತೆ ಕೆಎಸ್ಆರ್'ಟಿಸಿಯ ವ್ಯವಸ್ಥಾಪಕ ನಿರ್ದೇಶಕರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟಲು ಕರ್ನಾಟಕ ಸರ್ಕಾರವು ವಾರಾಂತ್ಯದಲ್ಲಿ ಅಂದರೆ ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ಕರ್ಪ್ಯೂ ಜಾರಿಗೊಳಿಸಿರುತ್ತದೆ. ಕರ್ಪ್ಯೂ ಮಧ್ಯೆಯೂ ಪ್ರಯಾಣಿಕರ ಅಗತ್ಯತೆಗೆ ಅನುಗುಣವಾಗಿ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚರಿಸಲಿದೆ. 

 ಕರ್ಫ್ಯೂ ಅವಧಿಯಲ್ಲಿ ಕೆಎಸ್ಆರ್'ಟಿಸಿ ನಿಗಮದ ಬಸ್ಸುಗಳ ಕಾರ್ಯಾಚರಣೆ ಇದ್ದು, ಪ್ರಯಾಣಿಕರ ದಟ್ಟಣೆ ಮತ್ತು ಅವಶ್ಯಕತೆ ಅನುಗುಣವಾಗಿ ಮಾತ್ರ ಸಾರಿಗೆಗಳನ್ನು ಕಾರ್ಯಾಚರರಿಸಲಾಗುವುದು. ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಕೋವಿಡ್-19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದ್ದಾರೆ.

ಈ ನಡುವೆ ಬಿಎಂಟಿಸಿ ಅಧಿಕಾರಿಗಳು ಪ್ರತಿಕ್ರಿಯೆ ನೀಡಿ, ಅನುಮತಿ ಪಡೆದ ಕೈಗಾರಿಕೋದ್ಯಮಗಳಲ್ಲಿ ಕೆಲಸ ಮಾಡುವವರು ಮತ್ತು ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ನೌಕರರ ಅನುಕೂಲವಾಗುವ ಸಲುವಾಗಿ ವಾರಾಂತ್ಯದ ಕರ್ಫ್ಯೂ ಸಮಯದಲ್ಲಿ 450-500 ಬಸ್ ಗಳು ಕಾರ್ಯನಿರ್ವಹಿಸಲಿವೆ ಎಂದು ಹೇಳಿದ್ದಾರೆ. 

ಇದಲ್ಲದೆ, ವಿಮಾನ ನಿಲ್ದಾಣಕ್ಕೆ ತೆರಳುವ ಹಾಗೂ ನಿಲ್ದಾಣದಿಂದ ವಾಪಸ್ಸಾಗುವ ಸಾರ್ವಜನಿಕರ ಸಂಚಾರಕ್ಕಾಗಿ ವಾಯುವಜ್ರ ಬಸ್ ಗಳು ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದ್ದಾರೆ. ಕೊರೋನಾ ನಿಯಮ ಪಾಲನೆಗಾಗಿ ಬಸ್ ಗಳಲ್ಲಿ ಶೇ.50ರಷ್ಟು ಜನರಿಗೆ ಮಾತ್ರ ಪ್ರಯಾಣಿಸಲು ಅವಕಾಶ ಮಾಡಲಾಗಿದೆ ಎಂದಿದ್ದಾರೆ. 

SCROLL FOR NEXT