ರಾಜ್ಯ

ರಸ್ತೆಗಳಲ್ಲಿ ಉಗುಳದಿರಿ, ನಿಮ್ಮ ಉಗುಳಿನಿಂದಲೂ ಕೊರೋನಾ ಹರಡಬಹುದು...ಎಚ್ಚರ!

Manjula VN

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ ಅಬ್ಬರಿಸುತ್ತಿದ್ದು, ಸೋಂಕು ಹೆಚ್ಚಾದರೂ ಜನರ ಬೇಜವಾಬ್ದಾರಿತನ ಮುಂದುವರೆದಿದೆ. ಸರಿಯಾಗಿ ಮಾಸ್ಕ್ ಧರಸದಿರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಕಂಡುಬರುತ್ತಿದೆ. ಕೆಲವರಂತೂ ಪ್ರಜ್ಞೆಯಿಲ್ಲದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳುವುದು ಕಂಡು ಬರುತ್ತಿವೆ. ಈ ಉಗುಳು ಕೂಡ ಕೊರೋನಾ ಸೋಂಕು ಹರಡಲು ಕಾರಣವಾಗಬಹುದು ಎಂಬುದು ನಿಮಗೆ ಗೊತ್ತೇ...? 

ಎಲ್ಲೆಂದರಲ್ಲಿ ಸಾಮಾಜಿಕ ಸಮಸ್ಯೆಯಾಗದೇ ಇರಬಹುದು. ಆದರೆ, ಇತ್ತೀಚಿನ ದಿನಗಳಲ್ಲಿ ಇದೊಂದು ಸಮಸ್ಯೆಯಾಗಿ ಮಾರ್ಪಟ್ಟಿದೆ. ಪ್ರಮುಖವಾಗಿ ಕೊರೋನಾ ಸೋಂಕು ಸಂದರ್ಭದಲ್ಲಿ ಹೆಚ್ಚು ಜನರಿಗೆ ಇದು ಸಮಸ್ಯೆಯಾಗಿ ಮಾರ್ಪಟ್ಟಿದೆ. ಈ ಸಮಸ್ಯೆಯನ್ನು ಕೂಡಲೇ ಪರಿಹರಿಸಬೇಕಿದೆ, ಜನರು ಎಲ್ಲೆಂದರಲ್ಲಿ ಉಗುಳುವುದನ್ನು ನಿಲ್ಲಿಸಬೇಕಿದೆ ಎಂದು ಎನ್'ಜಿಒ ಸಂಸ್ಥೆಯೊಂದು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.

ಬ್ಯೂಟಿಫುಲ್ ಬೆಂಗಳೂರು ಎಂಬ ಎನ್'ಜಿಒ ಸಂಸ್ಥೆಯೊಂದು ಸ್ಟಾಪ್'ಇಂಡಿಯಾಸ್ಪಿಟ್ಟಿಂಗ್ ಅಭಿಯಾನ ಆರಂಭಿಸಿದೆ.

ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಪ್ರತಿಕ್ರಿಯೆ ನೀಡಿರುವ ಬ್ಯೂಟಿಫುಲ್ ಬೆಂಗಳೂರಿನ ಸಹ ಸಂಸ್ಥಾಪಕ ಒಡೆಟ್ಟೆ ಕತ್ರಕ್ ಅವರು, ಉಗುಳುವುದು ದೊಡ್ಡ ಸಮಸ್ಯೆಯೆಂದು ಸರ್ಕಾರವೇ ಒಪ್ಪಿಕೊಂಡಿದೆ. ಇದನ್ನು ನಿಲ್ಲಿಸಲು ಸಾಕಷ್ಟು ಪರಿಶ್ರಮಪಡಬೇಕಿದೆ ಎಂದು ಹೇಳಿದ್ದಾರೆ. 

ಇದೊಂದು ಗಂಭೀರ ವಿಚಾರವೆಂದು ಪರಿಗಣಿಸಿ ಸರ್ಕಾರವೇ ರಸ್ತೆಗಳಲ್ಲಿ ಉಗುಳುವ ಜನರಿಗೆ ದಂಡ ವಿಧಿಸಲು ಮಾರ್ಷಲ್ ಗಳು ಹಾಗೂ ಆರೋಗ್ಯಾಧಿಕಾರಿಗಳನ್ನು ನಿಯೋಜಿಸಿದೆ. ಇದೀಗ ಜನರೂ ಕೂಡ ಜಾಗೃತಿ ಮೂಡಿಸಲು ಮುಂದಕ್ಕೆ ಬರಬೇಕಿದೆ. ಇದೊಂದು ಅಭಿಯಾನ ಪ್ರತಿಯೊಬ್ಬ ನಾಗರಿಕನನ್ನು ವಿಶೇಷವಾಗಿ ಯುವಕರನ್ನು ಒಳಗೊಳ್ಳುವ ಮೂಲಕ ಸಾಮಾಜಿಕ ಚಳುವಳಿಯಾಗಬೇಕು ತಿಳಿಸಿದ್ದಾರೆ.

ಸರ್ಕಾರದ ವೈದ್ಯಕೀಯ ಸಲಹೆಗಾರ ಡಾ.ಕುನಾಲ್ ಶರ್ಮಾ ಅವರು ಮಾತನಾಡಿ, ಉಗುಳುವುದು ಜ್ವರ, ಟಿಬಿ, ಎಚ್ಐವಿ, ಮೆನಿಂಜೈಟಿಸ್, ಕೋವಿಡ್ ಮತ್ತು ಇತರ ಗಾಳಿಯಿಂದ ಹರಡುವ ರೋಗಗಳಂತಹ ಅನೇಕ ಆರೋಗ್ಯ ಸ್ಥಿತಿಗಳಿಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ. 

ಹಸಿರು ದಳದ ನಳಿನಿ ಶೇಖರ್ ಎಂಬುವವರು ಮಾತನಾಡಿ. ರಸ್ತೆಗಳನ್ನು ಸ್ವಚ್ಛ ಮಾಡಲು ಬರುವ ಪೌರಕಾರ್ಮಿಕರು ಈ ಉಗುಳನ್ನು ಸ್ವಚ್ಛ ಮಾಡುತ್ತಾರೆಂಬುದನ್ನು ಜನರು ಅರಿಯುತ್ತಿಲ್ಲ. ಇದರಿಂದ ಅವರಿಗೆ ಅತೀ ಶೀಘ್ರದಲ್ಲಿ ಸೋಂಕು ತಗುಲುತ್ತದೆ ಎಂದು ತಿಳಿಸಿದ್ದಾರೆ. 

SCROLL FOR NEXT