ರಾಜ್ಯ

ಕೋವಿಡ್ ಎರಡನೇ ಅಲೆಯಿಂದ ಸಾವಿನ ಸಂಖ್ಯೆ ಹೆಚ್ಚಳ: 'ಬಿದಿರಿನ ಚಟ್ಟ' ಗಳಿಗೆ ಹೆಚ್ಚಿದ ಬೇಡಿಕೆ!

Shilpa D

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೋವಿಡ್ ಎರಡನೆಯ ಅಲೆ ಕಾರಣದಿಂದ ಸಾವಿನ ಸಂಖ್ಯೆ ಹೆಚ್ಚುತ್ತಿದೆ, ಹೀಗಾಗಿ ಬಿದಿರಿನ ಕೆಲಸ ಮಾಡುವ ಕಾರ್ಮಿಕರು ಹೆಚ್ಚು ಕಾರ್ಯನಿರತರಾಗಿದ್ದಾರೆ.

ಕಳೆದ 1 ವರ್ಷದಲ್ಲಿ 1,144 ಮಂದಿ ಮೈಸೂರಿನಲ್ಲಿ ಕೊರೋನಾದಿಂದ ಸಾವನ್ನಪ್ಪಿದ್ದಾರೆ, ಬೆಂಗಳೂರು, ಬಳ್ಳಾರಿ ಮತ್ತು ದಕ್ಷಿಣ ಕನ್ನಡದ ನಂತರ ಮೈಸೂರು ಸ್ಥಾನ ಪಡೆದಿದೆ.

ವಿಜಯನಗರ ನಾಲ್ಕನೇ ಹಂತದ ಮುಕ್ತಿಧಾಮ ಶವಾಗಾರಕ್ಕೆ ಶವಗಳ ಸಂಖ್ಯೆ ಹೆಚ್ಚು ಬರುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಸಿಟಿ ಕಾರ್ಪೋರೇಷನ್ , ನಂಜುಮಾಲಿಗೆಯ ಬಿದಿರಿನ ಅಂಗಡಿ ಮಾಲೀಕರಾದ ಗುರುಪ್ರಸಾದ್‌ ಅವರಿಗೆ ಸುಮಾರು 150 ಬಿದಿರಿನ ಚಟ್ಟ ತಯಾರಿಸುವಂತೆ ಆದೇಶವನ್ನು ನೀಡಿದೆ.

ಕಾರ್ಪೊರೇಷನ್ ಕಾರ್ಮಿಕರು ದಿನ ಬಿಟ್ಟು ದಿನ 20-25 ಚಟ್ಟಗಳನ್ನು ಸಂಗ್ರಹಿಸುತ್ತಾರೆ. ಶವಗಳನ್ನು ಶ್ಮಶಾನಕ್ಕೆ ತಲುಪುತ್ತಿದ್ದಂತೆ, ಅವುಗಳನ್ನು ಬಿದಿರಿನ ಚಟ್ಟದ ಮೇಲೆ ಇರಿಸಲಾಗುತ್ತದೆ ಮತ್ತು ಶವಗಳನ್ನು ಸುಡುವ ಮೊದಲು ಕುಟುಂಬ ಸದಸ್ಯರನ್ನು ಕೊನೆಯ ವಿಧಿಗಳನ್ನು ಮಾಡಲು ಕರೆಯಲಾಗುತ್ತದೆ.

ಈ ಮೊದಲು ದಿನಕ್ಕೆ ಒಂದು ಅಥವಾ ಎರಡು ಚಟ್ಟಗಳನ್ನು ಮಾರಾಟ ಮಾಡುತ್ತಿದ್ದರು ಮತ್ತು ವಾಲ್ ಪ್ಯಾನೆಲ್‌ಗಳು ಮತ್ತು ಪರದೆಗಳಂತಹ ಇತರ ಕರಕುಶಲ ವಸ್ತುಗಳ ಕೆಲಸ ಮಾಡುತ್ತಿದ್ದರು, ಆದರೆ ಕೋವಿಡ್ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚಟ್ಟಗಳನ್ನು ತಯಾರಿಸುವ ಕೆಲಸ ಹೆಚ್ಚುತ್ತಿದೆ ಎಂದು ಗುರುಪ್ರಸಾದ್ ಹೇಳಿದರು.

ಮೈಸೂರಿನಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿದ್ದು, ಜನರು ಮನೆಯೊಳಗೆ ಇರುವಂತೆ ಮನವಿ ಮಾಡಿದ್ದಾರೆ, ಪ್ರತಿ ಬಿದಿರಿನ ಚಟ್ಟವನ್ನು ಗುರುಪ್ರಸಾದ್ ಅವರಿಂದ 250 ರು.ಗೆ ಖರೀದಿಸಲಾಗುತ್ತಿದೆ, ಗ್ಯಾಸ್ ಮತ್ತು ವಿದ್ಯುತ್ ಚಿತಾಗಾರ ಎರಡರಲ್ಲೂ ಬಿದಿರಿನ ಚಟ್ಟ ಬಳಕೆ ಮಾಡಲಾಗುತ್ತದೆ ಎಂದು ಮೈಸೂರು ಆಯುಕ್ತೆ ಶಿಲ್ಪಾ ನಾಗ್ ಹೇಳಿದ್ದಾರೆ.

SCROLL FOR NEXT