ರಾಜ್ಯ

ಕೆಪಿಸಿಸಿ ವತಿಯಿಂದ ಕೋವಿಡ್ ಕೇಂದ್ರ, ಸಹಾಯವಾಣಿ, ರಕ್ತ ಪರೀಕ್ಷಾ ಘಟಕ ತೆರೆಯಿರಿ: ಸುರ್ಜೇವಾಲ

Vishwanath S

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಏನು ಮಾಡಬೇಕು. ರಾಜ್ಯದಲ್ಲಿ ಜನರಿಗೆ ಯಾವ ರೀತಿ ನೆರವಾಗಬೇಕು ಎಂಬ ನಿಟ್ಟಿನಲ್ಲಿ ಎಐಸಿಸಿಯಿಂದ ನಿರ್ದೇಶನ ಸೂಚನೆ ಪಡೆಯುವ ಸಂಬಂಧ ಕೆಪಿಸಿಸಿ ಅಧ್ಯಕ್ಷ ಸೇರಿದಂತೆ ಪಕ್ಷದ ಹಿರಿಯ ನಾಯಕರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಜೊತೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ವಿಡಿಯೋ ಸಂವಾದದಲ್ಲಿ ಕೆಪಿಸಿಸಿಯಿಂದ ರಾಜ್ಯಮಟ್ಟದಲ್ಲಿ ಕೋವಿಡ್ ಕೇಂದ್ರ ಹಾಗೂ ಕೋವಿಡ್ ಸಹಾಯವಾಣಿ ಸ್ಥಾಪಿಸುವ ಬಗ್ಗೆ ನಿರ್ಧರಿಸಲಾಯಿತು. 

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರು ಕೋವಿಡ್ ಸಮಯದಲ್ಲಿ ಪಕ್ಷ ಯಾವ ರೀತಿ ತನ್ನ ಜವಾಬ್ದಾರಿ ನಿಭಾಯಿಸಬೇಕೆಂದು ಸಲಹೆ ನೀಡಿದ್ದಾರೆ. ಆಸ್ಪತ್ರೆಗಳ ಮಾಹಿತಿ ಹೇಗೆ ಪಡೆಯಬೇಕು? ಸಾಮಾನ್ಯ ಜನರಿಗೆ ಹೇಗೆ ಸಹಾಯ ಮಾಡಬೇಕು? ಎಂಬಿತ್ಯಾದಿ ಬಗ್ಗೆ ಕಾಂಗ್ರೆಸ್ ಪಕ್ಷ ನಿಭಾಯಿಬೇಕಾದ ಜವಬ್ದಾರಿ ಬಗ್ಗೆ 51 ನಾಯಕರು ಸಲಹೆ ನೀಡಿದ್ದಾರೆ. ಅದರಂತೆ ಕಾಂಗ್ರೆಸ್ ನಿಂದ ರಾಜ್ಯಮಟ್ಟ ಕೋವಿಡ್ ಕೇಂದ್ರ ನಿರ್ಮಿಸುವ ಬಗ್ಗೆ ನಿರ್ಧರಿಸಲಾಗಿದೆ ಎಂದರು. 

ಖಾಸಗಿ ಆಸ್ಪತ್ರೆಗಳಿಗೆ ಡ್ರಗ್, ಔಷಧಿ ಸರಬರಾಜು ಮಾಡಲು ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರ ಸಹಾಯಕ್ಕೂ ಕಾಂಗ್ರೆಸ್ ನಿಲ್ಲುತ್ತದೆ. ಏಕಾಏಕಿಯಾಗಿ ಲಾಕ್ ಡೌನ್ ಘೋಷಣೆ ಮಾಡಿರುವುದರಿಂದ ಜನ ಸಾಮಾನ್ಯರಿಗೆ ತೊಂದರೆ ಆಗಲಿದೆ. ಹೀಗಾಗಿ ಸರ್ಕಾರ ಅವರಿಗೆ ಆರ್ಥಿಕ ಪ್ಯಾಕೇಜ್ ಕೊಡುವಂತೆ ಒತ್ತಾಯಿಸುತ್ತೇವೆ. ಸರ್ಕಾರದ ಮೇಲೆ ಈ ಸಂಬಂಧ ಯಾವ ರೀತಿ ಒತ್ತಾಯ ಮಾಡಬೇಕೆಂದು ಪಕ್ಷದ ನಾಯಕರ ಜೊತೆ ಚರ್ಚಿಸಿ ತೀರ್ಮಾನಿಸುವುದಾಗಿ ಶಿವಕುಮಾರ್ ಹೇಳಿದರು.

ಬಡವರಿಗೆ ಕಾಂಗ್ರೆಸ್ ಸರ್ಕಾರದಿಂದ ನೀಡುತ್ತಾ ಬಂದಿರುವ ಅನ್ನಭಾಗ್ಯದ ಅಕ್ಕಿಯನ್ನು ಬಿಜೆಪಿ ಸರ್ಕಾರ ಕಡಿತಗೊಳಿಸಿ ಏಳು ಕೆಜಿ ಬದಲಿಗೆ ಎರಡು ಕೆಜಿ ಮಾಡಿರುವುದಕ್ಕೆ ನಾಚಿಕೆಯಾಗಬೇಕು. ಬಡವರ ಅಕ್ಕಿಯನ್ನು ಇವರೇನು ಕೈಯಿಂದ ಕೊಡುತ್ತಿರಲಿಲ್ಲ. ಇದಕ್ಕಿಂತ ದುರಂತ ಮತ್ತೊಂದಿಲ್ಲ ಎಂದು ಸರ್ಕಾರದ ನಡೆಗೆ ಡಿಕೆಶಿ ಅಸಮಾಧಾನ ವ್ಯಕ್ತಪಡಿಸಿ, ಇದರ ವಿರುದ್ಧಇದು ಹೋರಾಟ ಮಾಡುವ ಸಮಯವಲ್ಲ. ಜನರಿಗೆ ಸಹಾಯ ಮಾಡುವ ಸಮಯ.ಮುಂದೆ ಹೋರಾಟ ಮಾಡುವುದಾಗಿ ತಿಳಿಸಿದರು. 

ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ,ಕೆಪಿಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ನಡೆಸಿದ ವಿಡಿಯೋ ಸಂವಾದದಲ್ಲಿ ಕೆಪಿಸಿಸಿ ಅಧ್ಯಕ್ಷರು ಸೇರಿದಂತೆ ನಾವೆಲ್ಲ ಹಿರಿಯ ನಾಯಕರು ಪಾಲ್ಗೊಂಡಿದ್ದೆವೆ. ಸಂವಾದದಲ್ಲಿ ಸುರ್ಜೇವಾಲಾ ಕೆಲ ಸಲಹೆಗಳನ್ನು ಕೆಪಿಸಿಸಿಗೆ ಮತ್ತು ಕಾರ್ಯಕರ್ತರಿಗೆ ನೀಡಿದ್ದು, ಕೋವಿಡ್ ಗಾಗಿ ಕೆಪಿಸಿಸಿ ಕಚೇರಿ ಸೇರಿದಂತೆ ಜಿಲ್ಲಾಮಟ್ಟದಲ್ಲಿ ಸಹಾಯವಾಣಿ ಆರಂಭಿಸಬೇಕು. ರಕ್ತ ಪರೀಕ್ಷಾಕೇಂದ್ರ ತೆರೆಯಬೇಕು. ಸರ್ಕಾರದ ನಡೆ ಕೋವಿಡ್ ವೈಫಲ್ಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅರಿವು ಮೂಡಿಸಬೇಕು. ಇದಕ್ಕಾಗಿ ಮುಂಚೂಣಿ ಘಟಕಗಳು ಪರಸ್ಪರ ಸಹಕಾರದಿಂದ ಕೆಲಸ ಮಾಡಬೇಕು ಎಂದರು. 

ಆಕ್ಸಿಜನ್, ಆಂಬುಲೆನ್ಸ್ ಔಷಧ, ಸೋಂಕಿತರಿಗೆ ಬೆಡ್ ಸಹಾಯ ಮಾಡಲು ಸುರ್ಜೇವಾಲಾ ಸೂಚಿಸಿದ್ದು, ಇದಕ್ಕಾಗಿ ಕೆಪಿಸಿಸಿಯಲ್ಲಿರುವ ವೈದ್ಯರ ಪಟ್ಟಿ ಮಾಡಬೇಕು. ಐಸೋಲೇಷನಲ್ಲಿರುವವರಿಗೆ ಆಹಾರ ವಿತರಣೆ. ಗುಂಪು ಸೇರುವ ಕಡೆ ಕಾಂಗ್ರೆಸ್ ಚಿಹ್ನೆ ಇರುವ ಮಾಸ್ಕ್ ವಿರಿಸಬೇಕು. ಕೊರೋನಾದಿಂದ ಮೃತಪಟ್ಟವರಿಗೆ ಪಕ್ಷದಿಂದ ಸಂತಾಪ ಸೂಚಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. 

ವಿಡಿಯೋ ಸಂವಾದದಲ್ಲಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್, ಕೇಂದ್ರದ ಮಾಜಿ ಸಚಿವರಾದ ವೀರಪ್ಪ ಮೊಯ್ಲಿ, ಕೆ.ಎಚ್. ಮುನಿಯಪ್ಪ, ಮಾರ್ಗರೇಟ್ ಆಳ್ವ, ರೆಹಮಾನ್ ಖಾನ್, ಜಯರಾಮ್ ರಮೇಶ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ರಾಮಲಿಂಗಾರೆಡ್ಡಿ, ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳಿ, ಧೃವನಾರಾಯಣ್, ಮಾಧ್ಯಮ ವಿಭಾಗದ ಮುಖ್ಯಸ್ಥ ಬಿ.ಎಲ್. ಶಂಕರ್. ಸಹ ಅಧ್ಯಕ್ಷ ವಿ.ಆರ್. ಸುದರ್ಶನ್, ರಾಜ್ಯಸಭೆ ಸದಸ್ಯರಾದ ಜಿ.ಸಿ. ಚಂದ್ರಶೇಖರ್, ಎಲ್. ಹನುಮಂತಯ್ಯ, ನಾಸೀರ್ ಹುಸೇನ್, ರಾಜ್ಯದ ಮಾಜಿ ಸಚಿವರಾದ ಅಲ್ಲಂ ವೀರಭದ್ರಪ್ಪ, ಎಚ್.ಕೆ. ಪಾಟೀಲ್, ಕೆ.ಜೆ. ಜಾರ್ಜ್, ಟಿ.ಬಿ. ಜಯಚಂದ್ರ, ಎಂ.ಬಿ. ಪಾಟೀಲ್, ಮೋಟಮ್ಮ, ರಾಣಿ ಸತೀಶ್,  ಜಯಮಾಲ ಮತ್ತಿತರರು ಪಾಲ್ಗೊಂಡಿದ್ದರು.
 

SCROLL FOR NEXT