ರಾಜ್ಯ

ಖಾಸಗಿ ಲ್ಯಾಬ್ ಕೋವಿಡ್ ಪರೀಕ್ಷಾ ವರದಿಯನ್ನು ಮೊದಲು ಬಿಬಿಎಂಪಿ ವಾರ್ ರೂಮ್ ಗೆ ನೀಡಬೇಕು: ಅಶೋಕ್ ಎಚ್ಚರಿಕೆ

Shilpa D

ಬೆಂಗಳೂರು: ಕೋವಿಡ್ ಪರೀಕ್ಷಿಸುವ ಖಾಸಗಿ ಲ್ಯಾಬ್ ನವರು ಪರೀಕ್ಷಾ ವರದಿಯನ್ನು ನೇರವಾಗಿ ಜನರಿಗೆ ನೀಡದೇ ಮೊದಲು ಬಿಬಿಎಂಪಿ ವಾರ್ ರೂಮ್ ಗೆ ಮಾಹಿತಿ ನೀಡಬೇಕು ಎಂದು ಎಚ್ಚರಿಕೆ ನೀಡಿರುವುದಾಗಿ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ವಿಧಾನಸೌಧದದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಬೆಂಗಳೂರು ಕೊರೊನಾ ಹೆಚ್ಚಳ ಹಿನ್ನೆಲೆ ಇಂದು ಸಭೆ ನಡೆಸಿದ್ದೇವೆ.ಖಾಸಗಿ ಪ್ರಯೋಗಾಲಯದವರು ಮೊದಲು ಕೋವಿಡ್ ವರದಿಯನ್ನು ಬಿಬಿಎಂಪಿಗೆ ಮಾಹಿತಿ ನೀಡಬೇಕು. ಪಾಸಿಟಿವ್ ಬಂದ ಸೋಂಕಿತರ ಕುಟುಂಬಸ್ಥರಿಗೆ ತಕ್ಷಣವೇ ಜಿಂಕ್ ಟ್ಯಾಬ್ಲೆಟ್ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ.

ಪರೀಕ್ಷಾ ವರದಿ ವಿಳಂಬ ಬಗ್ಗೆ ಖಾಸಗಿ ಪ್ರಯೋಗಾಲಯಗಳಿಗೆ ತಕ್ಷಣ ಬಿಬಿಎಂಪಿಯ ಡೇಟಾ ಎಂಟ್ರಿ ಆಪರೇಟರ್ ಗಳನ್ನು ಕಳುಹಿಸಲಾಗುವುದು ಹಾಸಿಗೆ ವ್ಯವಸ್ಥೆಯನ್ನುಸಾರ್ವಜನಿಕ ಡೊಮೈನ್ ಗೆ ಹಾಕಲಾಗುವುದು. ಅದರಿಂದ ಯಾವ ಆಸ್ಪತ್ರೆಯಲ್ಲಿ ಎಷ್ಟು ಹಾಸಿಗೆಗಳು ಖಾಲಿ ಇವೆ ಎಂಬುದು ಗೊತ್ತಾಗಲಿದೆ. ಈ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಮಂಗಳವಾರ ರಾತ್ರಿಯಿಂದಲೇ ಜನತಾ ಕರ್ಪ್ಯೂ ಜಾರಿಗೊಳಿಸಲಾಗುತ್ತದೆ. ಕೊರೊನಾ ನಿಯಂತ್ರಣ ಹಿನ್ನೆಯಲ್ಲಿ ಸಾರ್ವಜನಿಕರು ನಿಯಮವನ್ನು ಪಾಲಿಸಿ, ಮನೆಯಲ್ಲಿಯೇ ಇರಬೇಕು. ಅನಗತ್ಯವಾಗಿ ಓಡಾಡದೆ ಸುರಕ್ಷಿತವಾಗಿರಬೇಕು.ರಾಜ್ಯದಲ್ಲಿ ಇನ್ನು ಮುಂದೆ ಯಾವುದೇ ಉದ್ಘಾಟನೆ ಕಾರ್ಯಕ್ರಮ, ಶಂಕು ಸ್ಥಾಪನೆ ಕಾರ್ಯಕ್ರಮ ಎರಡು ತಿಂಗಳು ನಡೆಸುವ ಹಾಗಿಲ್ಲ.

ಎಲ್ಲಾ ಸಚಿವರು ಅವರಿಗೆ ಕೊಟ್ಟ ಜವಬ್ದಾರಿಯಲ್ಲಿ, ಅವರವರ ಬೂತ್, ವಾರ್ಡ್ ನಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರು ವಿಪಕ್ಷ ನಾಯಕರಾಗಿ ಕೇವಲ ವಿರೋಧಕ್ಕಾಗಿ ವಿರೋಧ ಮಾಡುತ್ತಿದ್ದಾರೆ. ಆದರೆ ನಾವು ನಮ್ಮ ಕರ್ತವ್ಯವನ್ನು ನಿಭಾಯಿಸುತ್ತಿದ್ದೇವೆ ಎಂದು ಅಶೋಕ್ ಹೇಳಿದರು.

SCROLL FOR NEXT