ರಾಜ್ಯ

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಭಾಪತಿ ಬಸವರಾಜ ಹೊರಟ್ಟಿಗೆ ಕೊರೋನಾ ಪಾಸಿಟಿವ್

Lingaraj Badiger

ಬೆಂಗಳೂರು: ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಮಂಗಳವಾರ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

ಕಾಗೇರಿ ಅವರು ಶಿರಸಿಯಲ್ಲಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದು, ಅವರ ವರದಿ ಪಾಸಿಟಿವ್ ಬಂದಿದೆ. ಸೋಂಕು ಪತ್ತೆಯಾಗಿದ್ದರೂ ಯಾವುದೇ ರೀತಿಯ ಲಕ್ಷಣಗಳು ಇಲ್ಲ ಹಾಗೂ ಆರೋಗ್ಯವಾಗಿದ್ದಾರೆ. ಸರ್ಕಾರದ ಕೋವಿಡ್ ಮಾರ್ಗಸೂಚಿ ಪ್ರಕಾರ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.

ಸದ್ಯ ಕಾಗೇರಿಯವರು ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದು, ಇತ್ತೀಚಿಗೆ ಸಭಾಧ್ಯಕ್ಷರ ಸಂಪರ್ಕಕ್ಕೆ ಬಂದವರು ಸ್ವಯಂ ಪ್ರೇರಿತವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಾಗೇರಿ ಅವರು ಎರಡು ದಿನಗಳ ಹಿಂದೆಯಷ್ಟೇ ಸಿದ್ಧಾಪುರದಲ್ಲಿ ಮದುವೆ ಕಾರ್ಯಕ್ರಮದಲ್ಲಿ ಮಾಸ್ಕ್ ಇಲ್ಲದೇ ಭಾಗವಹಿಸಿದ್ದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

ಇನ್ನು ಸೋಮವಾರ ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳಿದ್ದ ಬಸವರಾಜ ಹೊರಟ್ಟಿ ಅವರು ಕೋವಿಡ್ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ತಪಾಸಣೆಗೆ ಒಳಗಾಗಿದ್ದರು. ಅವರಿಗೆ ಕೋವಿಡ್ ದೃಢಪಟ್ಟಿದ್ದು, ವೈದ್ಯರ ಸಲಹೆ ಮೇರೆಗೆ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

SCROLL FOR NEXT